ಬೆಂಗಳೂರು :ಪಾದರಾಯನಪುರದಲ್ಲಿ ಇಡೀ ವಾರ್ಡ್ನಲ್ಲಿ ರ್ಯಾಂಡಮ್ ಟೆಸ್ಟ್ ನಡೆಸಲು ಪಾಲಿಕೆ ಸಿದ್ಧತೆ ನಡೆಸಿತ್ತು. ಆದರೆ, ಸೋಮವಾರ ಆರಂಭವಾಗಬೇಕಿದ್ದ ಆರೋಗ್ಯ ಪರೀಕ್ಷೆ ಇನ್ನೂ ನಡೆದಿಲ್ಲ. ಹೀಗಾಗಿ ಈ ಬಗ್ಗೆ ಬಿಬಿಎಂಪಿ ಆಯುಕ್ತ ಬಿ ಹೆಚ್ ಅನಿಲ್‌ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ನಿರ್ಬಂಧಿತ ವಲಯವಾಗಿರುವ ಪಾದರಾಯನಪುರದಲ್ಲಿ 46 ಕೇಸ್ಗಳು ಬಂದಿರುವ ಹಿನ್ನೆಲೆ, ಯಾವ ರಸ್ತೆಗಳಲ್ಲಿ ಹೆಚ್ಚಿನ ಸೋಂಕಿತರು ಕಂಡು ಬಂದಿದ್ದಾರೋ ಆ ರಸ್ತೆಗಳಲ್ಲಿ ಶೇ. 100ರಷ್ಟು ಟೆಸ್ಟ್ ಮಾಡಲಿದ್ದೇವೆ. ಆದರೆ, ಗಂಟಲು ದ್ರವ ಪರೀಕ್ಷೆ ನಡೆಸಲು ಬೇಕಾದ ಕಿಯೋಸ್ಕ್ಗಳನ್ನ ಬೇರೆ ಕಡೆ ನಿಗದಿಪಡಿಸಿರುವುದರಿಂದ ಕೊರತೆಯಾಗಿದೆ. ಹೀಗಾಗಿ ಬುಧವಾರದಿಂದ ಟೆಸ್ಟ್ ಮಾಡಲಿದ್ದೇವೆ. ಇದಕ್ಕೆ ಸರ್ಕಾರವೂ ನಿರ್ದೇಶನ ಕೊಟ್ಟಿದೆ. ಆ ಪ್ರಕಾರ ಸ್ವಾಬ್ ಕಲೆಕ್ಷನ್ ಮಾಡಿ,ಪರೀಕ್ಷೆಗೆ ಕಳಿಸಲಾಗುವುದು ಎಂದರು.
ಇನ್ನು, ಬಿಬಿಎಂಪಿ ವ್ಯಾಪ್ತಿಗೆ ಹೊರ ಜಿಲ್ಲೆಯಿಂದ ಬರುವ ವ್ಯಕ್ತಿಗಳಿಗೆ ಕ್ವಾರಂಟೈನ್ ಮಾಡುವುದಿಲ್ಲ. ಆದರೆ, ಬೇರೆ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಮಾತ್ರ ಹದಿನಾಲ್ಕು ದಿನದ ಕ್ವಾರಂಟೈನ್ ಮಾಡಲಾಗುತ್ತದೆ. ಇನ್‌ಸ್ಟಿಟ್ಯೂಷನಲ್ ಕ್ವಾರಂಟೈನ್ಗೆ ಒಳಪಡುವವರು ಅವರದೇ ಖರ್ಚಿನಲ್ಲಿ ಹೋಟೆಲ್‌ನಲ್ಲಿ ಉಳಿಯಬಹುದು. ಅಥವಾ ಸರ್ಕಾರ ವ್ಯವಸ್ಥೆ ಮಾಡುವ ಹಾಸ್ಟೆಲ್, ಕಲ್ಯಾಣ ಮಂಟಪ ಶಾಲೆಗಳಲ್ಲಿ ಉಳಿಯುವ ಅವಕಾಶವಿದೆ ಎಂದರು.
ಪಾಲಿಕೆಯ ವತಿಯಿಂದ ಮತದಾರರ ಪಟ್ಟಿಯ ಆಧಾರದ ಮೇಲೆ ಹೆಲ್ತ್ ಸರ್ವೇ ನಡೆಸಲಾಗುತ್ತದೆ. ಅನೇಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದಿದ್ದರೂ ಅವರ ಸರ್ವೇ ನಡೆಸಲು ತಿಳಿಸಲಾಗಿದೆ. ಆರೋಗ್ಯ ಪರೀಕ್ಷೆ ನಡೆಸಿ, ಸ್ಯಾಂಪಲ್ಗಳನ್ನ ಕಲೆಕ್ಟ್ ಮಾಡಿ ಕಳಿಸುವಾಗ ಗೊಂದಲ ಮಾಡುವ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಬಗ್ಗೆ ಆಸ್ಪತ್ರೆಗಳ ಪ್ರತಿಕ್ರಿಯೆ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.