ಕರ್ನಾಟಕ

karnataka

ETV Bharat / city

2 ತಿಂಗಳಲ್ಲಿ 2 ಸಾವಿರ ಕೋಟಿಗೂ ಅಧಿಕ ಮೊತ್ತದ ಆಸ್ತಿ ತೆರಿಗೆ ಸಂಗ್ರಹ: ಬಿಬಿಎಂಪಿಯಿಂದ ಭರ್ಜರಿ ಬೇಟೆ - ಬಿಬಿಎಂಪಿ ಚುನಾವಣೆ

ಬಿಬಿಎಂಪಿ ಕೇವಲ ಎರಡು ತಿಂಗಳಲ್ಲಿ ಬರೋಬ್ಬರಿ ಎರಡು ಸಾವಿರ ಕೋಟಿಗೂ ಅಧಿಕ ಮೊತ್ತದ ಆಸ್ತಿ ತೆರಿಗೆ ಸಂಗ್ರಹ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ ಎಂದು ಪಾಲಿಕೆ ಕಂದಾಯ ವಿಭಾಗದ ವಿಶೇಷ ಆಯುಕ್ತ ದೀಪಕ್ ತಿಳಿಸಿದ್ದಾರೆ.

BBMP
BBMP

By

Published : Jun 4, 2022, 7:29 AM IST

ಬೆಂಗಳೂರು: ತೆರಿಗೆ ಸಂಗ್ರಹಿಸಲು ಹೆಣಗಾಡುತ್ತಿದ್ದ ಬಿಬಿಎಂಪಿ ಇದೀಗ ಸಾರ್ವಕಾಲಿಕ ದಾಖಲೆ ಬರೆದಿದೆ. ಕೇವಲ ಎರಡು ತಿಂಗಳಲ್ಲಿ ಎರಡು ಸಾವಿರ ಕೋಟಿಗೂ ಅಧಿಕ ಮೊತ್ತದ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ ಎಂದು ಪಾಲಿಕೆ ಕಂದಾಯ ವಿಭಾಗದ ವಿಶೇಷ ಆಯುಕ್ತ ದೀಪಕ್ ತಿಳಿಸಿದ್ದಾರೆ.

ಶುಕ್ರವಾರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಆರ್ಥಿಕ ವರ್ಷದ ಮೊದಲ ತಿಂಗಳಾದ ಏಪ್ರಿಲ್‌ನಲ್ಲಿ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ 5 ರಷ್ಟು ರಿಯಾಯಿತಿ ನೀಡಿತ್ತು. ಕೊರೊನಾ ಹಿನ್ನೆಲೆಯಲ್ಲಿ ಮತ್ತೊಂದು ತಿಂಗಳು ಅಂದರೆ ಮೇ ಅಂತ್ಯದ ವರೆಗೆ ಶೇ5ರಷ್ಟು ರಿಯಾಯಿತಿ ವಿಸ್ತರಿಸಲಾಗಿತ್ತು. ಸರ್ಕಾರ ಮತ್ತು ಬಿಬಿಎಂಪಿ ನೀಡಿದ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡಿರುವ ಆಸ್ತಿ ಮಾಲೀಕರು, ಪಾಲಿಕೆಗೆ 2022- 23ನೇ ಸಾಲಿನ ವಾರ್ಷಿಕ ಆಸ್ತಿ ತೆರಿಗೆ ಪಾವತಿಸಿದ್ದಾರೆ ಎಂದರು.

ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ವಿಶೇಷ ಆಯುಕ್ತ ದೀಪಕ್

2022 -23ನೇ ಸಾಲಿನಲ್ಲಿ ಪಾಲಿಕೆಯು ಆಸ್ತಿ ತೆರಿಗೆಯಿಂದ 3,475 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ. ಮೊದಲ ಎರಡು ತಿಂಗಳಲ್ಲಿ 2 ಸಾವಿರ ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಈ ಮೂಲಕ ವರ್ಷದ ಗುರಿಯ ಶೇ 58 ರಷ್ಟು ಆಸ್ತಿ ತೆರಿಗೆ ಸಂಗ್ರಹ ಮಾಡಿದಂತಾಗಿದೆ. ಉಳಿದ ಶೇ 42 ರಷ್ಟು ಆಸ್ತಿ ತೆರಿಗೆಯನ್ನು ಮುಂದಿನ 10 ತಿಂಗಳಲ್ಲಿ ಸಂಗ್ರಹಿಸಬೇಕಿದೆ ಎಂದು ಹೇಳಿದರು.

ಆನ್‌ಲೈನ್ ಪಾವತಿ ಪ್ರಮಾಣ ಹೆಚ್ಚಳ:ವರ್ಷದಿಂದ ವರ್ಷಕ್ಕೆ ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಪ್ರಮಾಣ ಹೆಚ್ಚಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 1,073 ಕೋಟಿ ರೂ. ಆಸ್ತಿ ತೆರಿಗೆ ಆನ್‌ಲೈನ್ ಮೂಲಕ ಪಾವತಿಯಾಗಿದೆ. ಉಳಿದ 937 ಕೋಟಿ ರೂ. ನಗದು ರೂಪದಲ್ಲಿ ಪಾವತಿಯಾಗಿದೆ. ಒಟ್ಟು 2,009 ಕೋಟಿ ರೂ. ಪಾವತಿಯಾಗಿದೆ ಎಂದು ಮಾಹಿತಿ ನೀಡಿದರು.

ಆರ್ಥಿಕ ವರ್ಷದ ಆರಂಭದ ತಿಂಗಳಾದ ಏಪ್ರಿಲ್ ಅಂತ್ಯಕ್ಕೆ 1,455 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗಿತ್ತು. ಮೇ ತಿಂಗಳಿನಲ್ಲಿ ಬರೋಬ್ಬರಿ 545 ಕೋಟಿ ರೂ. ಸಂಗ್ರಹವಾಗಿದೆ. ಈ ಹಿಂದಿನ ವರ್ಷದಲ್ಲಿ ಶೇ 5 ರಷ್ಟು ರಿಯಾಯಿತಿ ನೀಡಿದರೂ ಈ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹವಾಗಿರಲಿಲ್ಲ. ಬಿಬಿಎಂಪಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇವಲ ಎರಡು ತಿಂಗಳಲ್ಲಿ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಈ ಬಾರಿ ಬಿಬಿಎಂಪಿ ಬಜೆಟ್‌ನಲ್ಲಿ ಹಾಕಿಕೊಂಡ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಸಾಧಿಸುತ್ತೇವೆ ಎಂದು ವಿಶೇಷ ಆಯುಕ್ತ ದೀಪಕ್ ತಿಳಿಸಿದ್ದಾರೆ.

ಲೋಪಗಳನ್ನು ಸರಿಪಡಿಸಿ ವಾರ್ಡ್ ವಿಂಗಡಣೆಯ ಹೊಸ ಪಟ್ಟಿ ಸಲ್ಲಿಕೆ:ಲೋಪಗಳನ್ನು ಸರಿಪಡಿಸಿ ವಾರ್ಡ್ ವಿಂಗಡಣೆಯ ಹೊಸ ಪಟ್ಟಿಯನ್ನು ಇನ್ನೆರಡು ದಿನದಲ್ಲಿ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗುವುದು. 198 ವಾರ್ಡ್‌ಗಳಿದ್ದ ಬಿಬಿಎಂಪಿಯನ್ನು 243 ವಾರ್ಡ್‌ಗಳಿಗೆ ಹೆಚ್ಚಿಸಲಾಗಿದ್ದು, ಈಗಾಗಲೇ ಮರುವಿಂಗಡಣಾ ಪಟ್ಟಿಯನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿತ್ತು.

ಗಡಿ ಗುರುತಿಸುವಿಕೆ, ಜನಸಂಖ್ಯೆ, ವಾರ್ಡ್ ಆದಾಯ ಸೇರಿದಂತೆ ವಿವಿಧ ನ್ಯೂನತೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಸರಿಪಡಿಸಿ ಕಳುಹಿಸುವಂತೆ ನಗರ ಅಭಿವೃದ್ಧಿ ಇಲಾಖೆ ಬಿಬಿಎಂಪಿಗೆ ಮೂರು ದಿನಗಳ ಗುಡುವು ನೀಡಿ ವಾಪಸ್ ಕಳುಹಿಸಿತ್ತು. ಈಗ ಅದನ್ನು ಸರಿಪಡಿಸಿ ಇನ್ನೆರಡು ದಿನದಲ್ಲಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಡಲಾಗುವುದು ಎಂದರು.

ಬಿಬಿಎಂಪಿಗೆ 8 ವಾರಗಳಲ್ಲಿ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. ಸರ್ಕಾರ ಹಾಲಿ 198 ವಾರ್ಡ್‌ಗಳನ್ನು 243ಕ್ಕೆ ಹೆಚ್ಚಿಸುವ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಅದರಂತೆ ವಾರ್ಡ್ ಪುನರ್ ವಿಂಗಡಣಾ ಪಟ್ಟಿಯನ್ನು ರೂಪಿಸಿ ಅದಕ್ಕೆ ತಕ್ಕಂತೆ ಮೀಸಲಾತಿ ಕಲ್ಪಿಸಿ, ತೀರ್ಪಿನ ಅನ್ವಯ ಎರಡು ತಿಂಗಳೊಳಗೆ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಹೇಳಿದರು.

ಆಗಸ್ಟ್/ಸೆಪ್ಟೆಂಬರ್ ತಿಂಗಳಿನಲ್ಲಿ ಚುನಾವಣೆ:ಈಗಾಗಲೇ ವಾರ್ಡ್‌ ಪುನರ್ ವಿಂಗಡಣಾ ಪಟ್ಟಿ ಕರಡು ಒಂದು ಬಾರಿ ಸಲ್ಲಿಕೆಯಾಗಿದ್ದು, ನ್ಯೂನತೆಗಳನ್ನು ಸರಿಪಡಿಸಿ ಮತ್ತೊಂದು ಬಾರಿ ಇನ್ನೆರಡು ದಿನದಲ್ಲಿ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದರು.

ಇದನ್ನೂ ಓದಿ:ಬಿಬಿಎಂಪಿ ಸಲ್ಲಿಸಿದ್ದ ವಾರ್ಡ್ ಮರು ವಿಂಗಡಣೆ ಕರಡು ವಾಪಸ್ ಕಳುಹಿಸಿದ ಸರ್ಕಾರ..

ABOUT THE AUTHOR

...view details