ಬೆಂಗಳೂರು : ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ರಾಜರಾಜೇಶ್ವರಿ ನಗರ ವಲಯ ಮತ್ತು ದಕ್ಷಿಣ ವಲಯ ವ್ಯಾಪ್ತಿಯಲ್ಲಿ ವಿವಿಧ ಭಾಗಗಳಲ್ಲಿ ಮಳೆಯಿಂದ ಆದ ಅನಾಹುತ ಪ್ರದೇಶದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿ, ರಾಜಕಾಲುವೆ ಹಾಗೂ ರಸ್ತೆ ಗುಂಡಿ ಮುಚ್ಚುವ ಕಾರ್ಯಗಳ ಪರಿಶೀಲನೆ ನಡೆಸಿದರು.
ಮೈಸೂರು ಹೆದ್ದಾರಿಯ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ:ರಾಜರಾಜೇಶ್ವರಿ ವಲಯ ಯಶವಂತಪುರ ವಿಧಾನಸಭಾ ಕ್ಷೇತ್ರ ಹೆಮ್ಮಿಗೆಪುರ ವಾಡ್೯- 198 ವ್ಯಾಪ್ತಿಯ ಮೈಸೂರು ಹೆದ್ದಾರಿ ರಸ್ತೆಯ ಬಿಡಿಎ ಸಂಕೀರ್ಣದ ಹತ್ತಿರ 19.20 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆಯ ತಡೆಗೋಡೆ ನಿರ್ಮಾಣ ಹಾಗೂ ಕಲ್ವರ್ಟ್ ಮೂಲಕ ನೀರು ಸರಾಗವಾಗಿ ಹರಿಯುವ ಸಲುವಾಗಿ ಕಾಲುವೆ ಕಾಮಗಾರಿಯ ಪ್ರಗತಿಯನ್ನು ಪರಿಶೀಲನೆ ನಡೆಸಿದರು.
ಈ ವೇಳೆ ಕಾಮಗಾರಿಯನ್ನು ಇನ್ನಷ್ಟು ಚುರುಕು ಗೊಳಿಸಿ ತ್ವರಿತವಾಗಿ ಕಲ್ವರ್ಟ್ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ವಲಯ ಆಯುಕ್ತ, ವಿಶೇಷ ಆಯುಕ್ತ ಹಾಗೂ ಸಂಬಂಧಿಸಿದ ಮುಖ್ಯ ಅಭಿಯಂತರರಿಗೆ ತಿಳಿಸಿದರು.
ಅಕ್ಕಮಹಾದೇವಿ ಕಲ್ಯಾಣ ಮಂಟಪದ ಹಿಂಭಾಗದ ಪ್ರದೇಶ ಪರಿಶೀಲನೆ:ನಂತರ ರಾಜರಾಜೇಶ್ವರಿ ವಾರ್ಡ್ 9 - 160 ವ್ಯಾಪ್ತಿಯ ಅಕ್ಕಮಹಾದೇವಿ ಕಲ್ಯಾಣ ಮಂಟಪದ ಹಿಂಭಾಗದ ಇತ್ತೀಚಿನ ಮಳೆಯಲ್ಲಿ ಜಾನುವಾರುಗಳು ಕೊಚ್ಚಿ ಹೋಗಿದ್ದ ಪ್ರದೇಶದಲ್ಲಿನ ರಾಜಕಾಲುವೆಗೆ ಮತ್ತೆ ಯಾವುದೇ ರೀತಿ ತೊಂದರೆಯಾಗದ ಹಾಗೆ ತಡೆಗೋಡೆ ನಿರ್ಮಾಣ ಕೈಗೊಳ್ಳಲು ಶೀಘ್ರವಾಗಿ ಟೆಂಡರ್ ಕರೆದು ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಾಡ್೯-160ರ ಪ್ರಮೋದ ಬಡಾವಣೆ ಪರಿಶೀಲನೆ:ವಾಡ್೯ -160ರ ವ್ಯಾಪ್ತಿಯ ಪ್ರಮೋದ ಬಡಾವಣೆಯಲ್ಲಿ ಮಳೆಯಿಂದ ಅಕ್ಕಪಕ್ಕದ ಪ್ರದೇಶಗಳಲ್ಲಿನ ಬಡಾವಣೆಯ ಮನೆಗಳಿಗೆ ನೀರು ಹರಿದು ಸಾಕಷ್ಟು ಹಾನಿಯಾಗಿದ್ದು, ಈ ಬಡಾವಣೆಯಲ್ಲಿರುವ ರಾಜಕಾಲುವೆಗೆ ಶೀಘ್ರವಾಗಿ ತಡೆಗೋಡೆ ನಿರ್ಮಿಸುವ ಸಲುವಾಗಿ ಟೆಂಡರ್ ಕರೆದು ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದರು.
ದಕ್ಷಿಣ ವಲಯದ ವಾರ್ಡ್-165ರ ರಾಜಕಾಲುವೆ ಪರಿಶೀಲನೆ :ದಕ್ಷಿಣ ವಲಯ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರ ಗಣೇಶ ಮಂದಿರ ವಾಡ್೯- 165 ವ್ಯಾಪ್ತಿಯಲ್ಲಿ ರಾಜಕಾಲುವೆ ಪರಿಶೀಲನೆ ನಡೆಸಿ ಈ ರಾಜಕಾಲುವೆಯಲ್ಲಿ ಅನುಪಯುಕ್ತ ವಸ್ತುಗಳು ಸೇರ್ಪಡೆಗೊಂಡು ನೀರು ಸರಾಗವಾಗಿ ಹರಿಯದೆ ನೀರು ಕಲ್ಮಷಗೊಂಡು ಸುತ್ತ ಮುತ್ತಲಿನ ಪ್ರದೇಶದಲ್ಲಿ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ, ಕೂಡಲೇ ಈ ರಾಜಕಾಲುವೆಯಲ್ಲಿ ಶೇಖರಣೆಗೊಂಡಿರುವ ಅನುಪಯುಕ್ತ ವಸ್ತುಗಳನ್ನು ಕೂಡಲೆ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ 2-3 ದಿನದ ಒಳಗಾಗಿ ಕ್ರಮ ಕೈಗೊಂಡು ವರದಿ ನೀಡುವಂತೆ ಬೃಹತ್ ನೀರುಗಾಲುವೆಯ ಮುಖ್ಯ ಅಭಿಯಂತರರಿಗೆ ಸೂಚಿಸಿದರು.
ಇದನ್ನೂ ಓದಿ:ಗಿರಾಕಿಗಳ ಜೊತೆ ಯುವತಿಯರ ಪ್ರವಾಸ: ಟೂರಿಸಂ ವೇಶ್ಯಾವಾಟಿಕೆ ಜಾಲದ ಆರೋಪಿಗಳು ಅಂದರ್