ಬೆಂಗಳೂರು: ಎಂಟು ವಾರಗಳಲ್ಲಿ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಆರಂಭಿಸಿ ಎಂದು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ, ಪಾಲಿಕೆ ಕೇಂದ್ರ ಕಚೇರಿಯಲ್ಲಿ ಹೊಸ ವಾತಾವರಣವೇ ಗರಿಗೆದರಿದೆ. ಇತ್ತ ಪಾಲಿಕೆಯ ನೂತನ ಸದಸ್ಯರಿಗಾಗಿ ಹೊಸ ಕೌನ್ಸಿಲ್ ಹೌಸ್ ತಲೆ ಎತ್ತುತ್ತಿದೆ. ರಾಜಧಾನಿ ಬೆಂಗಳೂರು ನಗರದ ಮಧ್ಯಭಾಗ ಬಿಬಿಎಂಪಿ ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೊಸ ಆಕಾರ ನೀಡಲಿದ್ದು, ಇದಕ್ಕೆ ಅಡಳಿತಾಧಿಕಾರಿಯಿಂದ ಅನುಮತಿ ಸಿಕ್ಕಿದೆ.
ಮತ್ತೊಂದೆಡೆ ವಾರ್ಡ್ ವಿಂಗಡಣೆಯಂತೆ ಈ ಬಾರಿ ಬಿಬಿಎಂಪಿ ಚುನಾವಣೆ ನಡೆಯುತ್ತಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳ ಕೌನ್ಸಿಲ್ ಕಟ್ಟಡವನ್ನೂ ವಿನ್ಯಾಸಗೊಳಿಸಲಾಗುತ್ತಿದೆ. ಬಿಬಿಎಂಪಿಯಲ್ಲಿ 198 ವಾರ್ಡ್ಗಳಿದ್ದು, ವಿಂಗಡಣೆ ನಂತರ 243 ವಾರ್ಡ್ ಆಗಲಿದೆ. ಈ ಹಿನ್ನೆಲೆಯಲ್ಲಿ ಕೌನ್ಸಿಲ್ ಕಟ್ಟಡ ಮರು ವಿನ್ಯಾಸದ ಜೊತೆಗೆ ಹೈಟೆಕ್ ತಂತ್ರಜ್ಞಾನ ಅಳವಡಿಕೆಗೆ ಸಿದ್ದತೆ ನಡೆಸಲಾಗುತ್ತಿದೆ.
ಇದಕ್ಕಾಗಿ 10 ಕೋಟಿ ವೆಚ್ಚದಲ್ಲಿ ಪಾಲಿಕೆ ಕೌನ್ಸಿಲ್ ಕಟ್ಟಡ ಮರು ವಿನ್ಯಾಸ ಮಾಡಲಾಗುತ್ತಿದೆ. ಇದುವರೆಗೂ 270 ಮಂದಿ ಆಸನಗಳ ಅವಕಾಶವಿದ್ದ ಕೌನ್ಸಿಲ್ ಸಭಾಂಗಣ, ಪಾಲಿಕೆ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ಶಾಸಕರು, ಸಂಸದರು ಪರಿಷತ್ ಸದಸ್ಯರಿಗೆ 270 ಸ್ಥಾನ ಸೀಮಿತವಾಗಿತ್ತು. ಈಗ ಪಾಲಿಕೆ ಕೌನ್ಸಿಲ್ 364 ಮಂದಿಗೆ ಕುರ್ಚಿಗಳ ಸಂಖ್ಯೆ ಏರಿಸುತ್ತಿದೆ.
ಚುನಾವಣೆ ತಡವಾಗಿದ್ದು ಯಾಕೆ?:198 ಇದ್ದ ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದ್ದ ಪರಿಣಾಮ ಚುನಾವಣೆ ನಡೆಸಲು ವಿಳಂಬವಾಗಿತ್ತು. ಇದೀಗ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಚುನಾವಣಾ ಆಯೋಗಕ್ಕೆ ಎಂಟು ವಾರದೊಳಗೆ ಪ್ರಕ್ರಿಯೆ ನಡೆಸುವಂತೆ ಸೂಚಿಸಲಾಗಿದೆ. ಹಾಗೇ ವಾರ್ಡ್ವಿಂಗಡಗೆಯನ್ನು ಎಂಟು ವಾರದೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೂ ಸೂಚನೆ ನೀಡಿದೆ.
ಇದನ್ನೂ ಓದಿ:ವಾಯವ್ಯ ಪದವೀಧರ-ಶಿಕ್ಷಕ ಕ್ಷೇತ್ರಕ್ಕೆ ಚುನಾವಣೆ : ಡಿಕೆಶಿ ಸಮ್ಮುಖದಲ್ಲಿ ಕೈ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ