ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ?, ಮನೆ ಬದಲಾಯಿಸಿದ್ದರೆ ಹೊಸ ಮತದಾರರ ಪಟ್ಟಿಗೆ ಹೆಸರು ವರ್ಗಾವಣೆ ಮಾಡೋದು ಹೇಗೆ?, 18 ವರ್ಷ ತುಂಬಿದ್ದು, ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗೋದು ಹೇಗೆ?, ಹೀಗೆ ಜನರ ಗೊಂದಲಗಳಿಗೆ ಬಿಬಿಎಂಪಿ ಹಾಗೂ ಚುನಾವಣಾ ಆಯೋಗ ವಿಶೇಷ ನೋಂದಣಿ ಅಭಿಯಾನದ ಮೂಲಕ ಸೇರ್ಪಡೆಗೊಳಿಸಲು ಮುಂದಾಗಿದೆ.
ಬಿಬಿಎಂಪಿಯು ಸೋಮವಾರ ಕರಡು ಮತದಾರರ ಪಟ್ಟಿಯನ್ನು ಪ್ರಕಟಣೆ ಮಾಡಲಿದೆ. ನಂತರ ಡಿಸೆಂಬರ್ 8 ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಅಥವಾ ಹೆಸರು, ವಿಳಾಸದಲ್ಲಿ ವ್ಯತ್ಯಾಸಗಳಿದ್ದರೆ ತಿದ್ದುಪಡಿ ಮಾಡಿಕೊಳ್ಳಲು, ಹೆಸರನ್ನು ತೆಗೆಯಲು, ಬೇರೆ ವಿಧಾನಸಭಾ ಕ್ಷೇತ್ರಕ್ಕೆ ಅಥವಾ ಆ ಕ್ಷೇತ್ರದ ಒಳಗೇ ಹೆಸರನ್ನು ವರ್ಗಾವಣೆ ಮಾಡಿಕೊಳ್ಳಲು ಅವಕಾಶಗಳಿರುತ್ತವೆ. ಇದೆಲ್ಲ ಆದನಂತರ ಜನವರಿ 13ನೇ ತಾರೀಕು ಅಂತಿಮ ಮತದಾರರ ಪಟ್ಟಿಯನ್ನು ಬಿಬಿಎಂಪಿ ಪ್ರಕಟಿಸಲಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ದಯಾನಂದ್ ತಿಳಿಸಿದರು.
ಇನ್ನು ಜನರಿಗೆ ಅನುಕೂಲ ಆಗಲು, ಭಾನುವಾರದಂದೂ ಕೂಡ ಪಾಲಿಕೆ ಈ ಸೇವೆ ಒದಗಿಸಲು ಮುಂದಾಗಿದೆ. ಹೀಗಾಗಿ ಚುನಾವಣಾ ಆಯೋಗ ವಿಶೇಷ ಅಭಿಯಾನದ ಮೂಲಕ ನಾಲ್ಕು ಭಾನುವಾರಗಳಂದು ವಾರ್ಡ್ ಆಫೀಸ್, ಮತದಾರರ ನೋಂದಣಾಧಿಕಾರಿಗಳ ಕಚೇರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ ಮತ್ತು ಮತಗಟ್ಟೆಗಳಲ್ಲಿ ಅರ್ಜಿ ಸಲ್ಲಿಸಬಹುದು.
ರೇಡಿಯೋ ಹಾಗೂ ಮೆಟ್ರೋ ನಿಲ್ದಾಣಗಳಲ್ಲೂ ಈ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಇನ್ನು ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಹಾಗೂ ಹೆಲ್ಪ್ ಲೈನ್ ನಂಬರ್ಗಳನ್ನು ಆಯೋಗ ಸಿದ್ಧತೆ ಮಾಡಿದೆ.