ಬೆಂಗಳೂರು :ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಂಟುತ್ತಾ ಸಾಗಿರುವ ರಸ್ತೆ ಕಾಮಗಾರಿಗಳು, ರಸ್ತೆಗಳ ಕಳಪೆ ನಿರ್ವಹಣೆ ಕುರಿತು ರಸ್ತೆ ವಿಭಾಗದ ಅಧಿಕಾರಿಗಳ ಸಭೆ ನಡೆಸಿದ ಬಿಬಿಎಂಪಿ ಆಡಳಿತಗಾರ ಗೌರವ್ ಗುಪ್ತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಸ್ತೆ ನಿರ್ವಹಣೆ ಕುರಿತು ಅಸಮಾಧಾನ.. ಅಧಿಕಾರಿಗಳಿಗೆ ಗೌರವ್ ಗುಪ್ತ ತರಾಟೆ ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದಡಿ 12 ಹೈಡೆನ್ಸಿಟಿ ಕಾರಿಡಾರ್ ಸೇರಿ ಸುಮಾರು 1,323 ಕಿ.ಮೀ ಉದ್ದದ ಆರ್ಟೀರಿಯಲ್ ಹಾಗೂ ಸಬ್-ಆರ್ಟೀರಿಯಲ್ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಯ ಹೊಣೆ ಹೊತ್ತಿದೆ. ರಸ್ತೆ ಗುಂಡಿಗಳು, ರಸ್ತೆ ಬದಿ ಶೇಖರಣೆಗೊಂಡಿರುವ ಕಟ್ಟಡ ತ್ಯಾಜ್ಯ, ಪಾದಚಾರಿ ಮಾರ್ಗವನ್ನು ಸಮರ್ಪಕವಾಗಿ ನಿರ್ವಹಿಸದಿರುವ ಬಗ್ಗೆ ಅಸಮಾಧಾನಗೊಂಡ ಗೌರವ್ ಗುಪ್ತ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪ್ರಮುಖವಾಗಿ ಜಕ್ಕಸಂದ್ರ ಬಳಿ ರಸ್ತೆಯು ತೀವ್ರ ಹದಗೆಟ್ಟರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಮುಖ್ಯ ಅಭಿಯಂತರರು ಸರ್ಜಾಪುರ ರಸ್ತೆಯ ದುರಸ್ಥಿಯನ್ನು ಕೂಡಲೇ ಕೈಗೊಳ್ಳುವುದಾಗಿ ತಿಳಿಸಿದರು. ಅಲ್ಲದೆ, ಹೈಡೆನ್ಸಿಟಿ ಕಾರಿಡಾರ್‌ಗಳಾದ ಹಳೇ ವಿಮಾನ ನಿಲ್ದಾಣ ರಸ್ತೆ, ಹಳೇ ಮದ್ರಾದ್ ರಸ್ತೆ ಮತ್ತು ಹೊರವರ್ತುಲ ರಸ್ತೆಯಲ್ಲಿ ಯೋಜನಾ ವಿಭಾಗದಿಂದ ಸಿಗ್ನಲ್ ಮುಕ್ತ ಕಾರಿಡಾರ್, ವೈಟ್ ಟಾಪಿಂಗ್ ಯೋಜನೆ ನಡೆಯುತ್ತಿರುವ ಬಗ್ಗೆ ಗಮನಕ್ಕೆ ತಂದರು. ಇದಕ್ಕೆ ಗೌರವ್ ಗುಪ್ತ ಅವರು, ಕಾಮಗಾರಿ ನಡೆಯುತ್ತಿರುವ ಸ್ಥಳಗಳ ನಕ್ಷೆ ತಯಾರಿಸಿ ಕೊಡುವಂತೆ ಸೂಚಿಸಿದರು.
ನಗರದ ಪ್ರಮುಖ ರಸ್ತೆಗಳ ಅಗಲೀಕರಣ, ಗ್ರೇಡ್ ಸೆಪರೇಟರ್ ನಿರ್ಮಾಣ, ರೈಲ್ವೆ ಮೇಲು ಸೇತುವೆ ಮತ್ತು ಕೆಳ ಸೇತುವೆ ಯೋಜನೆಗಳಿಗೆ ಭೂಸ್ವಾಧೀನ, ಮರಗಳ ಸ್ಥಳಾಂತರ, ಬೆಸ್ಕಾಂ, ಬಿಡಬ್ಲ್ಯೂಎಸ್ಎಸ್ಬಿ ಸಂಸ್ಥೆಯ ಮೂಲಸೌಕರ್ಯಗಳ ಸ್ಥಳಾಂತರದಿಂದ ಕಾಮಗಾರಿ ವಿಳಂಬವಾಗುತ್ತಿದೆ. ಸಂಬಂಧಪಟ್ಟ ಇಲಾಖೆಯೊಡನೆ ಸಮನ್ವಯ ಸಭೆ ನಡೆಸಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.