ಕರ್ನಾಟಕ

karnataka

ETV Bharat / city

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ನಾಮಪತ್ರ ಸಲ್ಲಿಕೆ

ವಿಧಾನಸೌಧದ ಮೊದಲ ಮಹಡಿಯಲ್ಲಿರುವ ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರ ಕಚೇರಿಗೆ ಬಸವರಾಜ್ ಹೊರಟ್ಟಿ ತೆರಳಿ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

ಬಸವರಾಜ್ ಹೊರಟ್ಟಿ ನಾಮಪತ್ರ ಸಲ್ಲಿಕೆ
ಬಸವರಾಜ್ ಹೊರಟ್ಟಿ ನಾಮಪತ್ರ ಸಲ್ಲಿಕೆ

By

Published : Feb 8, 2021, 12:16 PM IST

Updated : Feb 8, 2021, 12:43 PM IST

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಒಮ್ಮತದ ಅಭ್ಯರ್ಥಿಯಾಗಿ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಸವರಾಜ್ ಹೊರಟ್ಟಿ

ವಿಧಾನಸೌಧದ ಮೊದಲ ಮಹಡಿಯಲ್ಲಿರುವ ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರ ಕಚೇರಿಗೆ ಬಸವರಾಜ್ ಹೊರಟ್ಟಿ ತೆರಳಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಆಡಳಿತ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಎಂಟಿಬಿ ನಾಗರಾಜ್, ಹಿರಿಯ ಸದಸ್ಯರಾದ ಆಯನೂರು ಮಂಜುನಾಥ್, ನಾರಾಯಣಸ್ವಾಮಿ, ಭಾರತಿ ಶೆಟ್ಟಿ, ವಿಧಾನ ಪರಿಷತ್ ಜೆಡಿಎಸ್ ಸಚೇತಕ ಅಪ್ಪಾಜಿಗೌಡ, ರಮೇಶ್ ಗೌಡ ಶ್ರೀಕಂಠೇಗೌಡ ಮತ್ತಿತರರು ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಕೆ ಬಳಿಕ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಮಾತನಾಡಿ, ವಿಧಾನ ಪರಿಷತ್ ಸಭಾಪತಿ ಚುನಾವಣೆ ನಾಳೆ ನಡೆಯಲಿದ್ದು, ಇದಕ್ಕೆ ಜಂಟಿ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸಿದ್ದೇನೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಶುಭ ಗಳಿಗೆ ನೋಡಿ ನಾಮಪತ್ರ ಸಲ್ಲಿಕೆ ಮಾಡಿಲ್ಲ, ಮಾಮೂಲಿಯಾಗಿ ನಾಮಪತ್ರ ಸಲ್ಲಿಸಿರುವೆ. ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದರೆ. ನಾನು ಬಿಜೆಪಿ ಜೊತೆ ಜಂಟಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಇದರ ಪರಿಶೀಲನೆ ಆಗಲಿದೆ. ಕಾಂಗ್ರೆಸ್ ನಾಮಪತ್ರ ಸಲ್ಲಿಕೆ ಬಗ್ಗೆ ಏನನ್ನೂ ಹೇಳಲು ಇಚ್ಛಿಸುವುದಿಲ್ಲ. ಸಭಾಪತಿಯಾಗಲು ಒಂದು ಅವಕಾಶ ಸಿಕ್ಕಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುತ್ತೇನೆ ಎಂದರು.

ಸಚಿವ ಹಾಗೂ ವಿಧಾನ ಪರಿಷತ್ ಆಡಳಿತ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಏಳು ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಸಭಾಪತಿ ಆಗುವ ಅವಕಾಶ ಲಭಿಸಿದೆ. ಅವರಿಗೆ ನಮ್ಮ ಅಭಿನಂದನೆ ಸಲ್ಲಿಸುತ್ತೇನೆ. ಭಾರತೀಯ ಜನತಾ ಪಕ್ಷ ಸಭಾಪತಿ ಚುನಾವಣೆಯಲ್ಲಿ ಬಸವರಾಜ್ ಹೊರಟ್ಟಿ ಅವರನ್ನು ಬೆಂಬಲಿಸಿದೆ. ಅವರು ಸಭಾಪತಿ ಆಗುತ್ತಾರೆ ಹಾಗೂ ದಕ್ಷವಾಗಿ ಆಡಳಿತ ನಡೆಸಿ ಒಂದು ಉತ್ತಮ ವ್ಯವಸ್ಥೆಯನ್ನು ಜಾರಿಗೆ ತರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ಬಸವರಾಜ್ ಹೊರಟ್ಟಿ ಅವರಿಗೆ ಬಿಜೆಪಿ ತನ್ನ ಬೆಂಬಲ ನೀಡಿದೆ. ಇವರು ಹಿರಿಯ ಮಾರ್ಗದರ್ಶಕರು. ಭಾರತೀಯ ಜನತಾ ಪಕ್ಷದ 31 ಸದಸ್ಯರು ಸಂಪೂರ್ಣವಾಗಿ ಹೊರಟ್ಟಿ ಅವರನ್ನು ಬೆಂಬಲಿಸಿದ್ದೇವೆ. ನಾಳೆ ಚುನಾವಣೆ ನಡೆಯಲಿದೆ. ಒಂದೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ವಾಪಸ್ ಪಡೆದರೆ ಹೊರಟ್ಟಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಬಿಜೆಪಿ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿರುವ ಹೊರಟ್ಟಿಯವರಿಗೆ ಮುಂಚಿತವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಕುರಿತು ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆ ಪರಿಷತ್​ನಲ್ಲಿ ಅನುಮೋದನೆ ಪಡೆಯಲಿದೆ. ಮಸೂದೆ ನಮ್ಮ ಮುಂದೆ ಇದೆ. ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಒಟ್ಟಾಗಿ ಕುಳಿತು ಸಮಾಲೋಚಿಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಕಾಯ್ದೆ ಅನುಮೋದನೆ ಪಡೆಯುವಲ್ಲಿ ಯಾವುದೇ ಸಂಶಯವಿಲ್ಲ. ಜೆಡಿಎಸ್ ಬೆಂಬಲ ಸಿಗಲಿದೆ ಎಂಬ ವಿಶ್ವಾಸವನ್ನು ಹೊರಟ್ಟಿ ವ್ಯಕ್ತಪಡಿಸಿದರು.

Last Updated : Feb 8, 2021, 12:43 PM IST

ABOUT THE AUTHOR

...view details