ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಮೊಮ್ಮಾಯಿಯವರು ಕಳೆದ ವರ್ಷ ಜುಲೈ 28ರಂದು ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಬಿಜೆಪಿ ಸರ್ಕಾರದಲ್ಲಿ ಇವರೆಷ್ಟು ದಿನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿಯಾರು?, ತಂದೆ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಷ್ಟು ದಿನವೂ ಆಡಳಿತ ನಡೆಸುತ್ತಾರೋ ಇಲ್ಲವೋ? ಅಥವಾ ತಂದೆಯಂತೆ ಅಲ್ಪಾವಧಿಯಲ್ಲಿಯೇ ಅಧಿಕಾರ ಕಳೆದುಕೊಳ್ಳಬಹುದೆಂದು ಮಾತನಾಡಿಕೊಂಡವರೇ ಹೆಚ್ಚು.
ಬೊಮ್ಮಾಯಿ ಹೆಜ್ಜೆಹೆಜ್ಜೆಗೂ ರಾಜಕೀಯ ಅನಿಶ್ಚಿತತೆಯ ಸವಾಲುಗಳಿದ್ದವು. ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಯನ್ನು ಆಗ ಬದಲಿಸುತ್ತಾರೆ, ಈಗ ಬದಲಿಸುತ್ತಾರೆ. ಇದೇ ತಿಂಗಳು ಕೊನೆ. ಈ ಬಾರಿ ಸಿಎಂ ಬೊಮ್ಮಾಯಿವರನ್ನು ಖಂಡಿತ ಬದಲಿಸಿಯೇ ಬಿಡುತ್ತಾರೆ ಎನ್ನುವ ಗೊಂದಲಗಳು ಹಾಗು ಹಲವಾರು ಸವಾಲುಗಳ ನಡುವೆಯೇ ಬಸವರಾಜ ಬೊಮ್ಮಾಯಿ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ವರ್ಷದ ಆಡಳಿತ ಪೂರೈಸಿದ್ದಾರೆ. ಈ ಮುಖೇನ ತಾವೊಬ್ಬ ಬುದ್ಧಿವಂತ ರಾಜಕಾರಣಿಯೆಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಬಸವರಾಜ ಬೊಮ್ಮಾಯಿಯವರ ತಂದೆ ಎಸ್.ಆರ್.ಬೊಮ್ಮಾಯಿ 1988ರಲ್ಲಿ ಜನತಾದಳ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ಪಕ್ಷದಲ್ಲಿನ ಭಿನ್ನಮತೀಯ ಚಟುವಟಿಕೆಗಳಿಂದಾಗಿ ಕೇವಲ 8 ತಿಂಗಳ ಆಡಳಿತಾವಧಿಯಲ್ಲಿಯೇ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಬಸವರಾಜ ಬೊಮ್ಮಾಯಿವರು ಸಹ ಬಿಜೆಪಿಯಲ್ಲಿನ ಒಳ ರಾಜಕೀಯಕ್ಕೆ ಬಲಿಯಾಗಿ ಮೂರರಿಂದ ಆರು ತಿಂಗಳೊಳಗೆ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿತ್ತು.