ಬೆಂಗಳೂರು:ಶಿವಮೊಗ್ಗ ಜಿಲೆಟಿನ್ ಸ್ಫೋಟ ಪ್ರಕರಣ ಸಂಬಂಧ ಚರ್ಚೆಗೆ ಇನ್ನಷ್ಟು ಅವಕಾಶ ನೀಡುವಂತೆ ಕಾಂಗ್ರೆಸ್ ಹಾಗೂ ಸಾಕಷ್ಟು ಚರ್ಚೆಯಾಗಿದೆ ಎಂದು ಬಿಜೆಪಿ ನಾಯಕರು ಒತ್ತಾಯಿಸಿದ ಸನ್ನಿವೇಶ ವಿಧಾನ ಪರಿಷತ್ನಲ್ಲಿ ಸೃಷ್ಟಿಯಾಯಿತು.
ಕಲಾಪವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್, ಶಿವಮೊಗ್ಗ ಜಿಲೆಟಿನ್ ಸ್ಫೋಟ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಶಿವಮೊಗ್ಗ ಸಿಎಂ ಹಾಗೂ ಹಿರಿಯ ಸಚಿವರ ತವರಾಗಿದೆ. ಇಲ್ಲಿನ ಸ್ಫೋಟಕ್ಕೆ ಕಾರಣ ಏನೆಂದು ಯಾರೂ ಹೇಳುತ್ತಿಲ್ಲ. ಸಾಕಷ್ಟು ಅನುಮಾನ ಇದೆ. ಸಿಎಂ ಹಾಗೂ ಜಿಲ್ಲೆಯ ಸಚಿವರು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು. ಆರು ಜನ ಸತ್ತಿದ್ದಾರೆ, ಹಲವರು ಗಾಯಗೊಂಡಿದ್ದಾರೆ ಎಂದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಸ್ಫೋಟದ ತನಿಖೆ ನಡೆಯುತ್ತಿದೆ. ಈ ಗಣಿಗಾರಿಕೆ ವಿರುದ್ಧ 3 ಪ್ರಕರಣ ದಾಖಲಾಗಿದೆ. ಅವರಿಗೆ ಮತ್ತೆ ಮತ್ತೆ ಪರವಾನಗಿ ನೀಡಿದ್ದು ಯಾರು?. ಯಾಕೆ ಕಾಂಗ್ರೆಸ್ ಸರ್ಕಾರ ತಡೆದಿಲ್ಲ. 3-4 ದಶಕದಿಂದ ಇದು ನಡೆಯುತ್ತಿದೆ. 97 ಬೃಹತ್ ಕ್ರಷರ್ಗಳಿವೆ. ಇಲ್ಲಿ ಸಿಎಂ, ಸಚಿವರ ರಾಜೀನಾಮೆ ನೀಡುವ ಅಗತ್ಯವಿಲ್ಲ. ನೈತಿಕತೆ ಇದ್ದರೆ ಈ ಹಿಂದೆ ನಡೆದ ಘಟನೆಗೆ ಯಾರು ರಾಜೀನಾಮೆ ನೀಡಿದ್ದಾರೆ, ತನಿಖೆ ಏನಾಗಿದೆ. ಹಿಂದೆಯೂ ಸಾವು ಸಂಭವಿಸಿದೆ. ಮೂರು ದಿನದಲ್ಲಿ ಈ ಘಟನೆಯ ಆಮೂಲಾಗ್ರ ತನಿಖೆ ನಡೆಸಿದ್ದೇವೆ. 64 ಸಾವಿರ ಜಿಲೆಟಿನ್ ಕಡ್ಡಿಯನ್ನು ಆಂಧ್ರಕ್ಕೆ ತೆರಳಿ ವಶಪಡಿಸಿಕೊಂಡಿದ್ದೇವೆ.
ಆಂಧ್ರದ ಅನಂತಪುರಂನಿಂದ ಇದು ಬಂದಿದ್ದು ಹೇಗೆ ಎನ್ನುವುದನ್ನು ಪತ್ತೆ ಮಾಡಿದ್ದೇವೆ. ಕುಲಕರ್ಣಿ ಎಂಬ ವ್ಯಕ್ತಿ ವಿರುದ್ಧ ಕೇಸು ದಾಖಲಾಗಿದೆ. ಆದರೂ ಲೈಸನ್ಸ್ ನೀಡಲಾಗಿದೆ. 20 ವರ್ಷದಿಂದ ನಡೆಯುತ್ತಿರುವುದನ್ನು ರಕ್ಷಿಸಿದ್ದು ಯಾರು. ಆರೋಪಿಗಳನ್ನು ರಕ್ಷಿಸುವ ಕಾರ್ಯ ಮಾಡಿಲ್ಲ. 18 ತಿಂಗಳಲ್ಲಿ 40 ಸಾವಿರ ಜಿಲೆಟಿನ್ ಕಡ್ಡಿ ವಶಪಡಿಸಿಕೊಂಡಿದ್ದೇವೆ. ಬಿಡದಿ ಒಂದರಲ್ಲೇ 13 ಸಾವಿರ ಜಿಲೆಟಿನ್ ಕಡ್ಡಿ ವಶಪಡಿಸಿಕೊಂಡಿದ್ದೇವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದರು. ತನಿಖೆ ಇಲ್ಲಿಗೆ ನಿಲ್ಲಲ್ಲ, ಮುಖ್ಯ ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ. ಶೇ. 100ರಷ್ಟು ನ್ಯಾಯ ಒದಗಿಸುತ್ತೇವೆ. ಅನುಮಾನ ಬೇಡ, ಪ್ರಾಮಾಣಿಕ ತನಿಖೆ ನಡೆಯಲಿದೆ. ಅಗತ್ಯಕ್ಕೆ ತಕ್ಕ ಗಣಿಗಾರಿಕೆ ಮಾಡಲೇಬೇಕು. ದುರಾಸೆಗೆ ಬಿದ್ದು ಗಣಿಗಾರಿಕೆ ಮಾಡುವಂತಿಲ್ಲ. ವಿವಿಧ ಇಲಾಖೆ ಸಹಯೋಗದೊಂದಿಗೆ ನಾವು ಪ್ರಾಮಾಣಿಕ ತನಿಖೆ ನಡೆಸಲಿದ್ದೇವೆ ಎಂದರು.
ಶಿವಮೊಗ್ಗ ಘಟನೆ ಗಮನಿಸಿದರೆ ಆತಂಕ ಆಗಲಿದೆ. ಇಲ್ಲಿ ಭಯೋತ್ಪಾದಕರು ಬಂದಿಲ್ಲ ಎನ್ನುವುದಕ್ಕೆ ಕಾರಣವೇನು? ಜನರಿಗೆ ಈ ಘಟನೆ ಬಗ್ಗೆ ಸಾಕಷ್ಟು ಅನುಮಾನ ಇದೆ. ಇದರಿಂದ ಸಮಗ್ರ ತನಿಖೆ ಆಗಲಿ ಎಂದು ಹರಿಪ್ರಸಾದ್ ಒತ್ತಾಯಿಸಿದರು.
ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ್ ಮಾತನಾಡಿ, ನಮ್ಮಲ್ಲಿ ತಪ್ಪಿತಸ್ಥರಿಲ್ಲ. ಯಾರಾದರೂ ಬಂದು ಪ್ರಭಾವ ಬೀರಿದ್ದಾರಾ? ಹಿಂದೆ ಸರ್ಕಾರಗಳಿಂದ ತಪ್ಪಾಗಿದ್ದರೆ ತನಿಖೆ ಮಾಡಿ. ಇಂದು ಸರ್ಕಾರದ ಗುಪ್ತಚರ ಇಲಾಖೆ ವಿಫಲವಾಗಿದೆ. ಗೃಹ ಸಚಿವರು ವಿಫಲವಾಗಿದ್ದಾರೆ. ಇವರ ಇಲಾಖೆ ನಿಷ್ಕ್ರಿಯವಾಗಿದೆ. ಇದು ಸರ್ಕಾರದ ವೈಫಲ್ಯ. ಚೆಕ್ ಪೋಸ್ಟ್ ಏನು ಮಾಡಿದೆ ಎಂದರು.