ಬೆಂಗಳೂರು: ಶಿವಮೊಗ್ಗ ಕಲ್ಲು ಕ್ವಾರಿ ಸ್ಫೋಟ ದುರಂತ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಸಿಎಂ ಸೂಚನೆ ನೀಡಿದ್ದು, ಪ್ರಾಥಮಿಕ ತನಿಖಾ ವರದಿ ಇಂದು ಸಂಜೆ ಬರುತ್ತೆ. ವರದಿ ಬಂದ ನಂತರ ಯಾರ ಕೈಯಲ್ಲಿ ತನಿಖೆ ನಡೆಸಬೇಕು ಎನ್ನುವ ಕುರಿತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡ ಪ್ರಮಾಣದ ಡೈನಾಮೈಟ್ ಬಳಕೆ ಮಾಡಿರುವುದು ತಿಳಿದುಬಂದಿದೆ. ಇಂತಹ ಸ್ಫೋಟ ಹಿಂದೆ ಎಂದೂ ಆಗಿಲ್ಲ. ಎಂಪಿ, ಎಂಎಲ್ಎ ಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎಲ್ಲರಿಂದ ಮಾಹಿತಿ ಪಡೆಯುತ್ತೇನೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ಮಾಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಲಾರಿಗಳಲ್ಲಿ ಇಂತಹ ಸ್ಫೋಟಕಗಳನ್ನು ಸಾಗಣೆ ಮಾಡುವ ಬಗ್ಗೆ ಇರುವ ನಿಯಮಗಳ ಕುರಿತು ಮರು ಚರ್ಚೆ ಆಗಬೇಕು. ಈ ಕುರಿತು ಗಣಿ ಇಲಾಖೆ ಜೊತೆ ಮಾತನಾಡುತ್ತೇನೆ. ನಿಯಮ ಸಡಿಲಿಕೆ ಬಗ್ಗೆ ಮರು ಚಿಂತನೆ ಮಾಡಿ, ಕ್ರಮ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಉನ್ನತ ಮಟ್ಟದ ತನಿಖೆಗೆ ಸಿಎಂ ಸೂಚನೆ ನೀಡಿದ್ದಾರೆ. ಪ್ರಾಥಮಿಕ ತನಿಖಾ ವರದಿ ಇಂದು ಸಂಜೆ ಬರಲಿದ್ದು, ನಂತರ ಯಾರ ಕೈಯಲ್ಲಿ ತನಿಖೆ ಮಾಡಬೇಕು ಅಂತ ಪ್ರಾಥಮಿಕ ವರದಿ ಬಂದ ಮೇಲೆ ನಿರ್ಧರಿಸಲಾಗುತ್ತದೆ ಎಂದರು.
ಕ್ವಾರಿ ಮಾಲೀಕ ಮತ್ತು ಸ್ಫೋಟಕ ಸಪ್ಲೈ ಮಾಡಿದವರ ವಿಚಾರಣೆ ಮಾಡಲಾಗುತ್ತಿದೆ. ಕ್ವಾರಿಗೆ ಅನುಮತಿ ಇತ್ತಾ? ಅಥವಾ ಅದರ ಅವಧಿ ಮುಕ್ತಾಯ ಆಗಿದೆಯಾ?, ಸ್ಫೋಟಕ ಸಪ್ಲೈ ಮಾಡಿರುವವರು ನಿಯಮಾನುಸಾರ ಮಾಡಿದ್ದಾರಾ? ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ. ಸಂಪೂರ್ಣ ತನಿಖೆ ಮಾಡಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಇನ್ನು ಮಾಧುಸ್ವಾಮಿ ಖಾತೆಯನ್ನು ಬದಲಿಸಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಮಾಧುಸ್ವಾಮಿಗೆ ಯಾವುದೇ ಅಸಮಾಧಾನವಿಲ್ಲ. ಅವರು ನನ್ನ ಜೊತೆ ಮಾತನಾಡಿದ್ದಾರೆ. ಇಬ್ಬರೂ ಒಟ್ಟಿಗೆ ಸಮನ್ವಯತೆಯಿಂದ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.