ಬೆಂಗಳೂರು:ತಂದೆ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಲು ಬರುವ ರಾಜಕೀಯ ಮುಖಂಡರೊಂದಿಗೆ ಚರ್ಚೆ ಮಾಡುವ ಮೂಲಕ ರಾಜಕೀಯ ಪಟ್ಟುಗಳನ್ನು ಕಲಿತ ಬಸವರಾಜ ಬೊಮ್ಮಾಯಿ, ತಂದೆಯ ಚುನಾವಣೆ ಕೆಲಸ ಮತ್ತು ಪಕ್ಷ ಸಂಘಟನೆಯ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ಜನತಾ ಪಕ್ಷದಲ್ಲಿ ಇವರಿಗೆ ಯಾವುದೇ ಜವಾಬ್ದಾರಿ ಇರದಿದ್ದರೂ, ಕ್ರಿಯಾಶೀಲರಾಗಿ ಸಂಘಟನೆಯಲ್ಲಿ ತೊಡಗುತ್ತಿದ್ದರು.
ಜನತಾ ಪರಿವಾರ ಇಬ್ಭಾಗ ಆದಾಗ ಎಸ್.ಆರ್.ಬೊಮ್ಮಾಯಿ ಅವರು ಹೆಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್‌ಗೆ ಹೋದರೆ, ಬಸವರಾಜ ಬೊಮ್ಮಾಯಿ ಮಾತ್ರ ಜೆಡಿಯುಗೆ ಸೇರ್ಪಡೆಯಾದರು. ಜೆಡಿಯುಗೆ ದೇವೇಗೌಡರು ಪ್ರಧಾನಿಯಾಗಿದ್ದಾಗ ಕೇಂದ್ರದಲ್ಲಿ ಎಸ್.ಆರ್.ಬೊಮ್ಮಾಯಿಗೆ ಮಾನವ ಸಂಪನ್ಮೂಲ ಸಚಿವ ಸ್ಥಾನ ನೀಡಿದ್ದರು.
ಜೆಡಿಯುನಲ್ಲೇ ಉಳಿದಿದ್ದ ಬೊಮ್ಮಾಯಿ
ಹೀಗಾಗಿ, ಬೊಮ್ಮಾಯಿ ದೇವೇಗೌಡರನ್ನು ಬಿಟ್ಟು ಬರುವ ಪರಿಸ್ಥಿತಿಯಲ್ಲಿರಲಿಲ್ಲ. ಜೆ.ಎಚ್.ಪಟೇಲ್ ಜತೆ ನಿಕಟ ಸಂಪರ್ಕ ಹೊಂದಿದ್ದ ಬಸವರಾಜ ಬೊಮ್ಮಾಯಿ, ತಂದೆ ಜೊತೆ ಹೋಗದೆ ಜೆಡಿಯುನಲ್ಲೇ ಉಳಿದುಕೊಂಡರು. ನಂತರ ಜೆಡಿಎಸ್‌ಗೆ ಮರಳಿದರು. ಆದರೆ, ಅವರಿಗೆ ಅಲ್ಲಿ ಮಹತ್ವದ ಜವಾಬ್ದಾರಿಗಳು ಲಭಿಸಲಿಲ್ಲ. ಬಳಿಕ ಅವರು ಬಿಜೆಪಿಯತ್ತ ಮುಖ ಮಾಡಿದರು.
ಜೆ.ಎಚ್.ಪಟೇಲ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಜಕೀಯ ಕಾರ್ಯದರ್ಶಿ, ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯ ಪಟ್ಟು, ಒಳ ಮರ್ಮಗಳನ್ನು ಅರಿತು ನಿರ್ವಹಿಸಿದ ಅನುಭವ ಬಸವರಾಜ ಬೊಮ್ಮಾಯಿ ಅವರಿಗಿದೆ. ತಂದೆ ಎಸ್.ಆರ್.ಬೊಮ್ಮಾಯಿ 1988-89 ರಲ್ಲಿ ಮುಖ್ಯಮಂತ್ರಿಯಾಗಿದ್ದರು. ಅಂದರೆ ಹೆಚ್ಚು-ಕಡಿಮೆ ಮೂರು ದಶಕಗಳ ನಂತರ ಅವರ ಪುತ್ರ ಬಸವರಾಜ ಬೊಮ್ಮಾಯಿ ಈಗ ಆ ಹುದ್ದೆ ಅಲಂಕರಿಸಿದ್ದಾರೆ.
ಹೆಚ್.ಡಿ.ದೇವೇಗೌಡರ ನಂತರ ಹೆಚ್.ಡಿ. ಕುಮಾರಸ್ವಾಮಿ ನಂತರ ಹೀಗೆ ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರ ಸಿಎಂ ಸ್ಥಾನ ಅಲಂಕರಿಸುತ್ತಿರುವ ಎರಡನೇ ವ್ಯಕ್ತಿ ಬಸವರಾಜ ಬೊಮ್ಮಾಯಿ ಆಗಿದ್ದಾರೆ.
ತಂದೆಯ ಹುಟ್ಟೂರಲ್ಲೇ ನೆಲೆ ಕಂಡುಕೊಂಡ ಬಸವರಾಜ
ಮೂಲತಃ ಹುಬ್ಬಳ್ಳಿಯವರಾದ ಬಸವರಾಜ ಬೊಮ್ಮಾಯಿ ಅವರು, ರಾಜಕೀಯ ನೆಲೆ ಕಂಡುಕೊಂಡಿದ್ದು ಶಿಗ್ಗಾಂವಿ ಕ್ಷೇತ್ರದಲ್ಲಿ. ಮಾಜಿ ಮುಖ್ಯಮಂತ್ರಿ ಪುತ್ರರಾದರೂ ಅವರ ರಾಜಕೀಯ ಹಾದಿ ಹೋರಾಟದಿಂದಲೇ ಕೂಡಿತ್ತು. ರಾಜಕೀಯ-ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಅವರನ್ನು ರಾಜಕೀಯ ಕ್ಷೇತ್ರ ಸೆಳೆಯುತ್ತದೆ. 1995ರಲ್ಲಿ ರಾಜ್ಯ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿಯೂ ನೇಮಕಗೊಂಡಿದ್ದರು.
1996-97ರಲ್ಲಿ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಜನತಾ ಪರಿವಾರ ರಾಜ್ಯದಲ್ಲಿ ಪ್ರಬಲವಾಗಿರುತ್ತದೆ. 1997ರಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ ಮೂಲಕ ಅಧಿಕೃತ ರಾಜಕೀಯ ಪಯಣ ಶುರುವಾಗುತ್ತದೆ. ರೈತರೊಂದಿಗೆ ಪಾದಯಾತ್ರೆ, ಐತಿಹಾಸಿಕ ಸಂಘಟನಾ ರ‍್ಯಾಲಿ, ಈದ್ಗಾ ಮೈದಾನ ಸಮಸ್ಯೆ ಪರಿಹಾರ ಸೇರಿ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ಕಾಲೇಜು ಹಂತದಲ್ಲೇ ಸಕ್ರಿಯರಾಗಿದ್ದರು.
37ನೇ ವಯಸ್ಸಿನಲ್ಲೇ ವಿಧಾನ ಪರಿಷತ್ಗೆ ಆಯ್ಕೆ
ಆದರೆ, ಮೊದಲ ಬಾರಿ ವಿಧಾನಸೌಧ ಪ್ರವೇಶ ಪಡೆಯಲು ಸಾಧ್ಯವಾಗಿದ್ದು 1997ರಲ್ಲಿ ಜನತಾ ಪಕ್ಷದಿಂದ. ತಮ್ಮ 37ನೇ ವಯಸ್ಸಿನಲ್ಲಿ ಅವರು ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳಿಂದ (ಧಾರವಾಡ-ಹಾವೇರಿ-ಗದಗ) ಆಯ್ಕೆಯಾಗಿದ್ದರು. ಅಲ್ಲಿಂದ ಬಸವರಾಜ ಬೊಮ್ಮಾಯಿ ಹಿಂದೆ ತಿರುಗಿ ನೋಡಿದ್ದೇ ಇಲ್ಲ. 2003ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ಅಲ್ಲಿಂದ ರಾಜಕೀಯವಾಗಿ ಶಾಶ್ವತ ನೆಲೆ ಕಂಡುಕೊಳ್ಳಲು ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಅಷ್ಟರಲ್ಲಿ ಅವರು ಬಿಜೆಪಿಗೆ ಸೇರಿದ್ದರು.
ಬಿಜೆಪಿ ಸೇರಿ 2008 ರಲ್ಲಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ
2008ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದ ಜನ ವಲಸಿಗನ ಕೈಹಿಡಿದಿದ್ದರು. ಅಷ್ಟರಲ್ಲಿ ಜನತಾ ಪರಿವಾರದಿಂದ ಬಿಜೆಪಿಗೆ ಸೇರಿಕೊಳ್ಳುವುದರ ಜತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ವಲಯದಲ್ಲೂ ಸ್ಥಾನ ಪಡೆದುಕೊಂಡರು.
ನಂತರ ಸತತ ಮೂರು ಬಾರಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಜನ ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದರು. ಆಯ್ಕೆಯಾದ ವರ್ಷವೇ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು. ಬಳಿಕ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವರ ಸಂಪುಟದಲ್ಲೂ ಅದೇ ಜಲಸಂಪನ್ಮೂಲ ಖಾತೆ ಸಚಿವರಾಗಿ ಮುಂದುವರಿದಿದ್ದರು.
ಈ ಮಧ್ಯೆ ಯಡಿಯೂರಪ್ಪ ಅವರು ಬಿಜೆಪಿಯಿಂದ ಬಂಡೆದ್ದು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸ್ಥಾಪಿಸಿದ ವೇಳೆ ಅದರ ಅಧಿಕೃತ ಘೋಷಣೆ ಹಾಗೂ ಸಮಾವೇಶ ಬೊಮ್ಮಾಯಿ ಅವರು ಪ್ರತಿನಿಧಿಸುವ ಹಾವೇರಿಯಲ್ಲೇ ಆಗುತ್ತದೆ. ಆಗ ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಆಹ್ವಾನವನ್ನೂ ನೀಡುತ್ತಾರೆ. ಆದರೆ, ವಿನಯದಿಂದ ನಿರಾಕರಿಸಿ, ಪಕ್ಷಕ್ಕೆ ನಿಷ್ಠರಾಗಿರುತ್ತಾರೆ. ಇದೀಗ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ಅದು ಕೂಡ ಒಂದು ಕಾರಣ ಎಂದು ಹೇಳಬಹುದು.
ಇದನ್ನೂ ಓದಿ:ದೇಶದ ರಾಜಕಾರಣಕ್ಕೆ ಮಾದರಿಯಾದ S.R. ಬೊಮ್ಮಾಯಿ ಪ್ರಕರಣದ ತೀರ್ಪಿನ ಒಂದು ಮೆಲುಕು