ಬೆಂಗಳೂರು: ತಾಂತ್ರಿಕ ಕಾರಣ ಹೊರಟ್ಟಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಂಗೀಕಾರಕ್ಕೆ ಅಡ್ಡಿಯಾಗಿದೆ. ಸೋಮವಾರ ಹೊರಟ್ಟಿ ತಮ್ಮ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಜೊತೆಗೆ ಮೇಲ್ಮನೆ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಸಭಾಪತಿ ಸ್ಥಾನಕ್ಕಾಗಿನ ರಾಜೀನಾಮೆ ಅಂಗೀಕಾರವಾಗುವ ಪ್ರಕ್ರಿಯೆ ಆರಂಭವಾಗಿದೆ. ಆದರೆ ನಿಯಮದ ಪ್ರಕಾರ ಮೇಲ್ಮನೆ ಸದಸ್ಯ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ಉಪಸಭಾಪತಿಗೆ ಮಾತ್ರ ರಾಜೀನಾಮೆ ನೀಡಬೇಕಾಗಿದೆ. ಉಪಸಭಾಪತಿ ಹುದ್ದೆ ಖಾಲಿ ಇರುವ ಕಾರಣದಿಂದಾಗಿ ರಾಜೀನಾಮೆಗೆ ತಡೆಯಾಗಿದೆ. ನಿಯಮಾವಳಿಗಳ ಪ್ರಕಾರ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ಸಭಾಪತಿಗೆ ಸಲ್ಲಿಸಬೇಕು.
ಒಂದು ಸಭಾಪತಿ ಹುದ್ದೆ ಖಾಲಿ ಇದ್ದರೆ ಉಪಸಭಾಪತಿಗೆ ನೀಡಬೇಕು. ಹೊರಟ್ಟಿ ಅವರು ಸಭಾಪತಿಯಾಗಿರುವುದರಿಂದ ಉಪಸಭಾಪತಿಗೆ ಖುದ್ದಾಗಿ ಸಲ್ಲಿಸಬೇಕು. ಉಪಸಭಾಪತಿ ಹುದ್ದೆಗೆ ಯಾರನ್ನಾದರೂ ನೇಮಕ ಮಾಡುವವರೆಗೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಲು ಬರುವುದಿಲ್ಲ. ತಕ್ಷಣಕ್ಕೆ ಸರ್ಕಾರ ಹಂಗಾಮಿ ಉಪಸಭಾಪತಿಯನ್ನಾದರೂ ನೇಮಕ ಮಾಡಬೇಕಿದೆ ಎಂದು ಮೂಲಗಳು ಹೇಳಿವೆ.