ಕರ್ನಾಟಕ

karnataka

ETV Bharat / city

ಪಶ್ಚಿಮ ಶಿಕ್ಷಕರ ಕ್ಷೇತ್ರ ಹೊರಟ್ಟಿಗೆ ಮೀಸಲಿಟ್ಟಿತಾ ಬಿಜೆಪಿ? - ಪರಿಷತ್​ನ ನಾಲ್ಕು ಸ್ಥಾನಗಳು ಜೂನ್​ನಲ್ಲಿ ತರವು

ಪರಿಷತ್​ನ ನಾಲ್ಕು ಸ್ಥಾನಗಳು ಜೂನ್​ನಲ್ಲಿ ತೆರವಾಗುತ್ತಿದ್ದು, ಬೆಜೆಪಿ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು. ಆದರೆ ಬಸವರಾಜ್​ ಹೊರಟ್ಟಿ ಅವರ ಕ್ಷೇತ್ರಕ್ಕೆ ಯಾರನ್ನೂ ಘೋಷಿಸದಿರುವುದು ಅಚ್ಚರಿ ಮೂಡಿಸಿತ್ತು. ಅದಕ್ಕೆ ಸದ್ಯ ತೆರೆ ಬಿದ್ದಿದೆ. ಹೊರಟ್ಟಿಯವರೇ ಜೆಡಿಎಸ್​ ಬಿಟ್ಟು ಬಿಜೆಪಿಗೆ ಬಂದು ಆ ಕ್ಷೇತ್ರದಿಂದ ಸ್ಪರ್ಧಿಸುವುದನ್ನು ಸ್ಪಷ್ಟ ಪಡಿಸಿದ್ದಾರೆ.

Basavaraj Horatti joined bjp
ಪಶ್ಚಿಮ ಶಿಕ್ಷಕರ ಕ್ಷೇತ್ರ ಹೊರಟ್ಟಿಗೆ ಮೀಸಲಿಟ್ಟಿತ್ತಾ ಬಿಜೆಪಿ..?

By

Published : Apr 3, 2022, 4:32 PM IST

ಬೆಂಗಳೂರು: ಜೂನ್ ತಿಂಗಳಿನಲ್ಲಿ ವಿಧಾನ ಪರಿಷತ್​ನ ನಾಲ್ಕು ಸ್ಥಾನಗಳು ತೆರವಾಗಲಿವೆ. ಎರಡು ಶಿಕ್ಷಕರ ಕ್ಷೇತ್ರ ಮತ್ತು ಎರಡು ಪದವೀಧರರ ಕ್ಷೇತ್ರಗಳು ತೆರವಾಗಲಿದ್ದು, ಭಾರತೀಯ ಜನತಾ ಪಕ್ಷ ಈಗಾಗಲೇ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಆದರೆ ಬಸವರಾಜ ಹೊರಟ್ಟಿ ಪ್ರತಿನಿಧಿಸುತ್ತಿರುವ ಕ್ಷೇತ್ರಕ್ಕೆ ಮಾತ್ರ ಇನ್ನೂ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಇದರ ಹಿಂದಿನ ರಾಜಕೀಯಕ್ಕೆ ಇಂದು ಉತ್ತರ ದೊರೆತಿದೆ.

ಬಿಜೆಪಿ ವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ಹಾಲಿ ಸದಸ್ಯ ಅರುಣ್ ಶಹಾಪುರ್, ವಾಯುವ್ಯ ಪದವೀಧರ ಕ್ಷೇತ್ರಕ್ಕೆ ಹಾಲಿ ಸದಸ್ಯ ಹನುಮಂತ ರುದ್ರಪ್ಪ ನಿರಾಣಿ ಮತ್ತು ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಎಂ.ವಿ. ರವಿಶಂಕರ್ ಹೆಸರನ್ನು ಘೋಷಣೆ ಮಾಡಿದ್ದು, ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟಿಸಿರಲಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಪ್ತ ಮೋಹನ್ ಲಿಂಬಿಕಾಯಿ ಅವರಿಗೆ ಈ ಬಾರಿಯ ಪಶ್ಚಿಮ ಶಿಕ್ಷಕರ ಕ್ಷೇತ್ರದ ಟಿಕೆಟ್ ಸಿಗಲಿದೆ ಎನ್ನಲಾಗಿತ್ತಾದರೂ ರಾಜಕೀಯ ಲೆಕ್ಕಾಚಾರ ಈಗ ಬೇರೆಯ ಉತ್ತರವನ್ನೇ ನೀಡಿದೆ.

ಸತತ 7 ಬಾರಿ ಆಯ್ಕೆಯಾಗಿ ಸೋಲಿಲ್ಲದ ಸರದಾರನಾಗಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧ ಕಣಕ್ಕಿಳಿಯಲು ವಿಧಾನಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಸುಧೀಂದ್ರ ದೇಶಪಾಂಡೆ, ಕರ್ನಾಟಕ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಸಂದೀಪ್ ಬೂದಿಹಾಳ ಪ್ರಯತ್ನಿಸಿದ್ದರು. ಆದರೆ ಯಾರ ಹೆಸರನ್ನೂ ಹೈಕಮಾಂಡ್ ಪ್ರಕಟಿಸಿರಲಿಲ್ಲ.

ಬಿಜೆಪಿಯಿಂದ ಕಣಕ್ಕೆ: ಹಾಲಿ ಸದಸ್ಯ ಬಸವರಾಜ ಹೊರಟ್ಟಿ ಜೆಡಿಎಸ್ ತೊರೆದು ಬಿಜೆಪಿ ಸೇರಲಿದ್ದಾರೆ. ಅದಕ್ಕಾಗಿ ಕ್ಷೇತ್ರ ಖಾಲಿ ಉಳಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿ ಬಿಜೆಪಿ ಮೂಲಗಳಿಂದ ತಿಳಿದುಬಂದಿತ್ತು. ಇಂದು ಈ ಕುರಿತು ಬಸವರಾಜ ಹೊರಟ್ಟಿ ಅವರೇ ಅಧಿಕೃತ ಹೇಳಿಕೆ ನೀಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ.

ಅಮಿತ್ ಶಾ ಗ್ರೀನ್ ಸಿಗ್ನಲ್:ವಿಧಾನ ಪರಿಷತ್ ಸಭಾಪತಿ ಬಸವರಾಜ್​ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮಿತಿ ನೀಡಿದ್ದಾರೆ.‌ ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆದ ನಂತರ ಶುಕ್ರವಾರ ನಡೆದಿದ್ದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ಇದಕ್ಕೆ ಅಮಿತ್ ಶಾ ಸಮ್ಮತಿ ನೀಡಿದ್ದಾರೆ. ಅದರಂತೆ ಇಂದು ಅಧಿಕೃತವಾಗಿ ಹೊರಟ್ಟಿಯೇ ಬಿಜೆಪಿ ಸೇರ್ಪಡೆ ಬಗ್ಗೆ ಘೋಷಣೆ ಮಾಡಿದ್ದಾರೆ.

ಹೊರಟ್ಟಿ ಸೇರ್ಪಡೆ ವಿರೋಧಕ್ಕೆ ಕೇರ್ ಮಾಡದ ಹೈಕಮಾಂಡ್:ಹೊರಟ್ಟಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದ್ದಂತೆ ಅಲರ್ಟ್ ಆಗಿದ್ದ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ರಾಜ್ಯ ನಾಯಕರ ಮೇಲೆ ಒತ್ತಡ ಹೇರಿ ಹೊರಟ್ಟಿ ಸೇರ್ಪಡೆಗೆ ವಿರೋಧಿಸಿದ್ದರು. ನಂತರ ಕ್ಷೇತ್ರ ವ್ಯಾಪ್ತಿಯ ಕೆಲ ಮುಖಂಡರು ಹೈಕಮಾಂಡ್​ಗೆ ಪತ್ರ ಬರೆದು ಬಸವರಾಜ್​ ಹೊರಟ್ಟಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಮನವಿ ಮಾಡಿದ್ದರು.

ಪತ್ರದಲ್ಲೇನಿತ್ತು?:ಬಸವರಾಜ್ ಹೊರಟ್ಟಿಗೆ ಈಗಾಗಲೇ 76 ವರ್ಷ ಆಗಿದೆ, 1980ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದರೂ 1999ರವರೆಗೆ ಲ್ಯಾಮಿಂಗ್ಟನ್ ಶಾಲೆಯಲ್ಲಿ ದೈಹಿಕ ಶಿಕ್ಷಕರ ಹುದ್ದೆ ಉಳಿಸಿಕೊಂಡು ವೇತನ ಪಡೆದಿದ್ದರು, ಒಟ್ಟಿಗೆ ಎರಡೆರಡು ವೇತನ ಪಡೆದಿದ್ದರು ಎನ್ನುವ ಆರೋಪವಿದೆ. ಧಾರವಾಡದಲ್ಲಿ ಎಸ್‌ಟಿ ಸಮಾಜಕ್ಕೆ ಸೇರಿದ ಸರ್ವೋದಯ ಶಿಕ್ಷಣ ಸಂಸ್ಥೆ ಆಸ್ತಿ ಕಬಳಿಸಿದ ಆರೋಪ ಇವರ ಮೇಲಿದ್ದು, ಹೊರಟ್ಟಿ ಅವರ ಮೇಲೆ ಎಫ್‌ಐಆರ್ ಕೂಡ ದಾಖಲಾಗಿದೆ.

ಹಿಂದುತ್ವದ ವಿರುದ್ಧದ ಚಳವಳಿಯಲ್ಲಿ ಕಾಂಗ್ರೆಸ್ ಜೊತೆ ಹೊರಟ್ಟಿ ಗುರುತಿಸಿಕೊಂಡಿದ್ದರು. ಬಿಜೆಪಿಯ ಸಿದ್ಧಾಂತಗಳನ್ನು ಹೊರಟ್ಟಿ ಅವರು ಈವರೆಗೆ ಸಂಪೂರ್ಣವಾಗಿ ಒಪ್ಪಿಂಡಿಕೊಂಡಿಲ್ಲ. ಅಲ್ಲದೆ ಹಾವೇರಿ, ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ 17 ಶಾಸಕರು, ಮೂವರು ಸಂಸತ್ ಸದಸ್ಯರು, ಮೂವರು ಕ್ಯಾಬಿನೆಟ್ ಸಚಿವರು, ಓರ್ವ ಕೇಂದ್ರ ಸಚಿವರು, ರಾಜ್ಯದ ಹಾಲಿ ಮುಖ್ಯಮಂತ್ರಿ ಸಹ ಇದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಒಬ್ಬರೇ ಒಬ್ಬ ಶಾಸಕರು ಇಲ್ಲ. ಹಾಗಾಗಿ ಹೊರಟ್ಟಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು ಎಂದು ಬಿಜೆಪಿಯ ಕೆಲ ನಾಯಕರು ಹೈಕಮಾಂಡ್​ಗೆ ಪತ್ರ ಬರೆದಿದ್ದರು. ಆದರೆ ಈ ಪತ್ರವನ್ನು ಬಿಜೆಪಿ ಹೈಕಮಾಂಡ್ ಪರಿಗಣಿಸಿಯೇ ಇಲ್ಲ ಎನ್ನುವುದು ಹೊರಟ್ಟಿ ಬಿಜೆಪಿ ಸೇರ್ಪಡೆ ಘೋಷಣೆಯಿಂದ ಸ್ಪಷ್ಟವಾಗಿದೆ.

ಇದನ್ನೂ ಓದಿ:ನೈಸ್ ಸಂಸ್ಥೆ ವಿರುದ್ಧ ಮತ್ತೆ ತೊಡೆ ತಟ್ಟಿ ನಿಂತ ದೊಡ್ಡಗೌಡರು.. ಕ್ರಮ ಕೈಗೊಳ್ಳುವಂತೆ ಆಗ್ರಹ

ABOUT THE AUTHOR

...view details