ಬೆಂಗಳೂರು : ಕರ್ನಾಟಕದ 32 ಸಕ್ಕರೆ ಕಾರ್ಖಾನೆಗಳು ಎಥನಾಲ್ ಉತ್ಪಾದನೆಯನ್ನು ಕೈಗೆತ್ತಿಕೊಂಡಿದೆ. ಇನ್ನೂ 60 ಸಕ್ಕರೆ ಕಾರ್ಖಾನೆಗಳು ಅನುಮತಿ ಪಡೆಯುವ ಹಂತದಲ್ಲಿವೆ. ರಾಜ್ಯ ಸರ್ಕಾರ ಎಥನಾಲ್ ನೀತಿಯನ್ನು ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಹಾಗೂ ಬಿಕ್ವೆಸ್ಟ್ ಕನ್ಸಲ್‍ಟೆನ್ಸಿ ಮತ್ತು ಇಂಜಿನಿಯರಿಂಗ್ ಪ್ರೈ.ಲಿ. ಸಹಯೋಗದೊಂದಿಗೆ ಖಾಸಗಿ ಹೋಟೆಲ್ನಲ್ಲಿ ಇಂದು ಆಯೋಜಿಸಿದ್ದ ಕರ್ನಾಟಕದಲ್ಲಿ ಎಥನಾಲ್ ಉತ್ಪಾದನೆಯ ನಿಯಮ, ಆವಿಷ್ಕಾರ ಹಾಗೂ ಸ್ಥಿರತೆಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಎಥನಾಲ್ ಉತ್ಪಾದನೆಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುವುದು. ಕೇವಲ ಕಬ್ಬಿನಿಂದ ಮಾತ್ರವಲ್ಲ, ಭತ್ತ, ಜೋಳ ಹಾಗೂ ಗೋಧಿಯ ಹೊಟ್ಟಿನಿಂದ ತಯಾರಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿಯೇ ಅತಿ ಹೆಚ್ಚು ಎಥನಾಲ್ ಉತ್ಪಾದನೆ ಕರ್ನಾಟಕದಲ್ಲಿ ಆಗಲಿದೆ ಎಂದರು.
ಇಂಧನ ಕ್ಷೇತ್ರದಲ್ಲಿ ಭಾರತ ಆತ್ಮನಿರ್ಭರತೆ ಸಾಧಿಸಬೇಕಿದೆ :ಎಥನಾಲ್ ಉತ್ಪಾದನೆಯಲ್ಲಿ ಇನ್ನಷ್ಟು ಸಂಶೋಧನೆಗಳಾಗಬೇಕು. ಈಗ ನವೀಕರಿಸಬಹುದಾದ ಇಂಧನ, ಹೈಡ್ರೋಜನ್ ಇಂಧನ ಮತ್ತು ಹಸಿರು ಇಂಧನದ ಬಹಳ ಮುಖ್ಯ. ಭಾರತದ ಶೇ. 43 ರಷ್ಟು ನವೀಕರಿಸಬಹುದಾದ ಇಂಧನವನ್ನು ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿದೆ. ಮೂರು ದೊಡ್ಡ ಸಂಸ್ಥೆಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.