ಬೆಂಗಳೂರು: ಅಕ್ರಮ-ಸಕ್ರಮ ಯೋಜನೆ ಕುರಿತು ಸುಪ್ರೀಂ ಕೋರ್ಟ್ ನಲ್ಲಿರುವ ಪ್ರಕರಣವನ್ನು ಆದಷ್ಟು ಬೇಗ ಇತ್ಯರ್ಥಪಡಿಸಿ ಅಕ್ರಮ ಸಕ್ರಮ ಯೋಜನೆಯನ್ನು ರಾಜ್ಯಾದ್ಯಂತ ಅನುಷ್ಠಾನಕ್ಕೆ ತರಲಾಗುತ್ತದೆ. ಎಷ್ಟೇ ಬಲಾಢ್ಯರು ರಾಜಕಾಲುವೆ ಒತ್ತುವರಿ ಮಾಡಿದ್ದರೂ ಕೂಡ ತೆರವು ಮಾಡದೇ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬೆಂಗಳೂರು ಬೃಹತ್ ಬೆಂಗಳೂರಾಗಿದೆ, ಮಹಾನಗರದ ವ್ಯಾಪ್ತಿ, ಜನಸಂಖ್ಯೆ ಹೆಚ್ಚಾಗುತ್ತಿದೆ. ವಸತಿ, ವಾಣಿಜ್ಯ ಚಟುವಟಿಕೆ ಹೆಚ್ಚಾದಂತೆ ತೆರಿಗೆ ಸಂಗ್ರಹವೂ ಹೆಚ್ಚಾಗಬೇಕು, 110 ಹಳ್ಳಿ ಈಗ ಸೇರಿಸಿಕೊಂಡಿದ್ದೇವೆ. ಎಸ್ಎಂ ಕೃಷ್ಣ ಕಾಲದಲ್ಲಿ 7 ನಗರಸಭೆ ಸೇರಿಸಿಕೊಂಡಿದ್ದೇವೆ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇದ್ದ ಜಾಗ ಪಾಲಿಕೆ ವ್ಯಾಪ್ತಿಗೆ ತಂದಾಗ ಮಾಡಬೇಕಾದ ಕೆಲಸ ಹೆಚ್ಚಿರಲಿದೆ, 18,52 ಲಕ್ಷ ಆಸ್ತಿಗಳಿವೆ.13,056 ಆಸ್ತಿಗಳ ತೆರಿಗೆ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. 9108 ಬಹುಮಹಡಿ ಕಟ್ಟಡ, 97 ವಾಣಿಜ್ಯ ಕಟ್ಟಡ, 11 ಲಕ್ಷ ವಸತಿ ಕಟ್ಟಡಗಳಿವೆ, 10,516 ಜನ ತಪ್ಪು ಆಸ್ತಿ ತೆರಿಗೆ ಘೋಷಣೆ ಮಾಡಿಕೊಂಡಿದ್ದಾರೆ. ಅವರಿಗೆ ನೋಟಿಸ್ ಕೊಡಲಾಗಿದೆ. ಕೆಲವು ಕಡೆ ತೆರಿಗೆ ಮಾರ್ಪಡಿಸಲಾಗಿದೆ. 56 ಸಾವಿರ ಕೋಟಿ ತೆರಿಗೆ ಸಂಗ್ರಹಿಸಿದ್ದೇವೆ ಎಂದರು.
ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ ಎ ಖಾತೆ ಬಿ ಖಾತೆ ಎಂದು ನಾವು ವ್ಯತ್ಯಾಸ ಮಾಡಲ್ಲ, ತೆರಿಗೆ ಒಂದೇ ರೀತಿ ಪಡೆಯಲಿದ್ದೇವೆ. ಬಿ ಖಾತೆ ಸಂಬಂಧ ಕಾನೂನು ಸರಳೀಕರಣ ಮಾಡಿ ಸಕ್ರಮಗೊಳಿಸಿ, ತೆರಿಗೆ ಸಂಗ್ರಹಕ್ಕೆ ಯತ್ನಿಸಲಾಗುತ್ತಿದೆ. ಈಗಾಗಲೇ ಅಕ್ರಮ- ಸಕ್ರಮ ಯೋಜನೆ ತಂದಿದ್ದು, ಅದು ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇದೆ. ಆದಷ್ಟು ಬೇಗ ಅದನ್ನು ಪರಿಹರಿಸಲಿದ್ದೇವೆ, ಬೆಂಗಳೂರು ಮಾತ್ರವಲ್ಲ ರಾಜ್ಯಾದ್ಯಂತ ಅಕ್ರಮ ಸಕ್ರಮ ನಿಂತಿದೆ. ಇದರ ಜಾರಿಯಿಂದ ತೆರಿಗೆ ಸಂಗ್ರಹ ಹೆಚ್ಚಾಗಲಿದೆ, ಜನರಿಗೂ ಸ್ವತ್ತು ಸಕ್ರಮವಾಗಲಿದೆ. ಈ ತೆರಿಗೆ ಸಂಗ್ರಹಕ್ಕೆ ಅಭಿಯಾನ ನಡೆಸಿ ಹೆಚ್ಚು ಪ್ರಮಾಣದಲ್ಲಿ ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಲಾಗುತ್ತದೆ ಎಂದರು.
ಉಳ್ಳವರ ರಾಜಕಾಲುವೆ ಒತ್ತುವರಿ ತೆರವು:
ಎಷ್ಟೇ ಮಳೆ ಬಂದರೂ ರಾಜಕಾಲುವೆ ಹೊರಗೆ ನೀರು ಬರಬಾರದು ಆ ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಬಡವರು ಮಾತ್ರವಲ್ಲದೇ ಎಷ್ಟೇ ಬಲಾಢ್ಯರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರೂ ತೆರವಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪಿ.ಆರ್. ರಮೇಶ್ ಪ್ರಶ್ನೆಗೆ ಉತ್ತರಿಸಿದ ಸಿಎಂ, 842 ಕಿ.ಮಿ ರಾಜಕಾಲುವೆಯನ್ನು ನಾವು ಗುರುತಿಸಿದ್ದೇವೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ರಾಜಕಾಲುವೆ ಸೇರಿ 440 ಕಿ.ಮೀ ಸಂಪೂರ್ಣ ರಾಜಕಾಲುವೆಗೆ ಗೋಡೆ ನಿರ್ಮಾಣವಾಗಿದೆ. ಬಾಕಿ ಕಾಲುವೆಗೆ ಕ್ರಮ ಕೈಗೊಳ್ಳಬೇಕು, 2016-2021 ರವರೆಗೆ ಒಟ್ಟು 313 ಕಿ.ಮೀ ರಾಜಕಾಲುವೆ ನಿರ್ಮಾಣ ಮಾಡಿದ್ದೇವೆ , ಕೆ.ಆರ್.ಪುರ ಸೇರಿ ತಗ್ಗು ಪ್ರದೇಶದ ಕಡೆ ನಾನು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ರಾಜಕಾಲುವೆ ಅಕ್ರಮ ಮಾಡಿ ಮನೆ ಕಟ್ಟಿ ಕೊಂಡಿದ್ದಾರೆ. ಈ ಸಂಬಂಧ ಈಗಾಗಲೇ ರಾಜ ಕಾಲುವೆ ಪುನರ್ ನಿರ್ಮಾಣ ಮಾಡಲು ಮಹಾನಗರ ಪಾಲಿಕೆಯಲ್ಲೇ ಸಭೆ ನಡೆಸಿ ತೀರ್ಮಾನ ಮಾಡಿದ್ದೇವೆ, ವಿಶೇಷವಾಗಿ ಬಾಟಲ್ ನೆಕ್ಸ್ ತೆಗೆದು ನಿರ್ಮಾಣ ಮಾಡಲು ಡಿಪಿಆರ್ ಮಾಡಲು ಹೇಳಿದ್ದೇವೆ. 128 ಕಿ.ಮೀ ಕೂಡಲೇ ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದು, 1200 ಕೋಟಿ ರೂ. ಒದಗಿಸಿ ರಾಜಕಾಲುವೆ ನಿರ್ಮಾಣ ಮಾಡಲಿದ್ದೇವೆ ಎಂದರು.
ಬಹಳ ಕಡೆ ರಾಜಕಾಲುವೆ ಜಾಗ ಅತಿಕ್ರಮವಾಗಿದೆ, ದೊಡ್ಡ ಭೂಕುಳಗಳು ದಾಖಲೆ ತಿರುಚಿದ್ದಾರೆ. ದೊಡ್ಡ ಕಂಪನಿಗಳು ಹೈ ಟವರ್ ಕಟ್ಟಿದ್ದಾರೆ. ಹಾಗಾಗಿ, ಬಹಳ ಅಡಚಣೆ ಆಗಿದೆ. ರಾಜ ಕಾಲುವೆ ಕಿರಿದಾಗಿದೆ, ಎಷ್ಟೇ ಮಳೆ ಬಂದರೂ ರಾಜಕಾಲುವೆ ಹೊರಗೆ ನೀರು ಬರಬಾರದು ಆ ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಇದನ್ನೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಉಳಿದ ರಾಜ ಕಾಲುವೆ ನಿರ್ಮಾಣ ಕಾರ್ಯವನ್ನೂ ಮುಂದೆ ಕೈಗೆತ್ತಿಕೊಳ್ಳುತ್ತೇನೆ ಎಂದರು.
ಸರ್ಕಾರದ ಪರ ವಾದಿಸಲು ನೇಮಿಸಿರುವ ಲೀಗಲ್ ಟೀಂ ಮುಂದುವರಿಕೆ:
ರಾಜಕಾಲುವೆ ಒತ್ತುವರಿ ಪ್ರಕರಣದಲ್ಲಿ ನ್ಯಾಯಾಲಯದಲ್ಲಿರುವ ವ್ಯಾಜ್ಯಗಳಲ್ಲಿ ಸರ್ಕಾರದ ಲೀಗಲ್‌ಸೆಲ್ ಯಾವ ರೀತಿ ಸಮರ್ಥವಾಗಿ ವಾದ ಮಂಡಿಸಿದೆ ಎನ್ನುವ ಪರ್ಫಾರ್ಮೆನ್ಸ್ ಆಧಾರದಲ್ಲಿ ಅವರನ್ನು ಮುಂದುವರೆಸಲಾಗುತ್ತದೆ, ಕಳಪೆ ನಿರ್ವಹಣೆ ಕಂಡು ಬಂದಲ್ಲಿ ಲೀಗಲ್ ಸೆಲ್ ಬದಲಾವಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ ಪ್ರಶ್ನೆಗೆ ಉತ್ತರಿಸಿದ ಸಿಎಂ, ರಾಜಕಾಲುವೆ ಸುತ್ತ ಅತಿಕ್ರಮಣವಾಗಿದೆ, 382 ಎಕರೆ ಒತ್ತುವರಿ ಜಾಗ ಗುರಿತಿಸಲಾಗಿದೆ, 2626 ಪ್ರಕರಣ ಇದರಲ್ಲಿವೆ. 1912 ಕೇಸ್ ಇತ್ಯರ್ಥವಾಗಿದ್ದು 714 ಬಾಕಿ ಇವೆ. ಇದನ್ನು ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ, ಕೇವಲ ಬಡವರ ಒತ್ತುವರಿ ತೆರವು ಮಾಡಿ, ಉಳ್ಳವರ ಒತ್ತುವರಿ ಜಾಗ ಉಳಿಸುವುದಿಲ್ಲ, ಎಲ್ಲಾ ತೆರವು ಮಾಡುತ್ತೇವೆ. ಇತ್ತೀಚೆಗೆ ಇಬ್ಬರು ಡೆವೆಲಪರ್ಸ್ ಮಾಡಿದ್ದ ಒತ್ತುವರಿ ತೆರವಿಗೆ ಸೂಚಿಸಿದ್ದೇನೆ, ದೊಡ್ಡವರು ಕೋರ್ಟ್ ಗೆ ಹೋಗುತ್ತಾರೆ ಎನ್ನುವುದು ನಿಜ, ಕಾನೂನು ನಮ್ಮ ಪರವಾಗಿದೆ. ಗಟ್ಟಿಯಾಗಿ ವಾದ ಮಾಡಿ ಒತ್ತುವರಿ ತೆರವು ಮಾಡುವ ಕೆಲಸ ನಿಮ್ಮದು ಎಂದು ಕಾನೂನು ಘಟಕಕ್ಕೆ ತಿಳಿಸಿದ್ದೇನೆ, ಎಷ್ಟು ಕೇಸು ಗೆದ್ದಿದ್ದಾರೆ, ಸೋತಿದ್ದಾರೆ ಎನ್ನುವುದನ್ನು ನೋಡಿ ಕಾನೂನು ಘಟಕವನ್ನು ಮುಂದುವರೆಸುವ ಕುರಿತು ನಿರ್ಧಾರ ಮಾಡುತ್ತೇವೆ. ಯಾವ ಭೇದವಿಲ್ಲದೆ ಎಲ್ಲರ ಕೇಸ್ನಲ್ಲೂ ತೆರವು ಮಾಡುವ ಕೆಲಸ ಮಾಡುತ್ತೇವೆ ಎಂದರು.