ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ ರದ್ದುಗೊಳಿಸಿ ಲೋಕಾಯುಕ್ತವನ್ನು ಸಿಂಧುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಮುಂದಿನ ನಡೆ ಕುರಿತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನೌಪಚಾರಿಕವಾಗಿ ಚರ್ಚೆ ನಡೆಸಿ ಸಲಹೆ ಪಡೆದಿದ್ದಾರೆ.
ಸಚಿವ ಸಂಪುಟ ಸಭೆ ನಂತರ ವಿಧಾನಸೌಧದಿಂದ ಬಿಎಸ್ವೈ ಅಧಿಕೃತ ನಿವಾಸ ಕಾವೇರಿಗೆ ಬಸವರಾಜ ಬೊಮ್ಮಾಯಿ ಆಗಮಿಸಿದರು. ಯಡಿಯೂರಪ್ಪ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಎಸಿಬಿ ರದ್ದುಗೊಳಿಸಿ ಹೈಕೋರ್ಟ್ ನೀಡಿದ ತೀರ್ಪು ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರವೂ ಯಡಿಯೂರಪ್ಪ ಅವರಿಂದ ಸಲಹೆ ಪಡೆದುಕೊಂಡರು.
ಪಕ್ಷದ ಪ್ರಣಾಳಿಕೆಯಲ್ಲೇ ಲೋಕಾಯುಕ್ತ ಬಲವರ್ಧನೆ ಕುರಿತು ಹೇಳಿದ್ದ ಬಿಜೆಪಿ ಈಗ ಯಾವ ನಡೆ ಅನುಸರಿಸಬೇಕು ಎನ್ನುವ ಕುರಿತು ಕೆಲಕಾಲ ಮಾತುಕತೆ ನಡೆಸಿದರು. ಈಗಾಗಲೇ ಸರ್ಕಾರಕ್ಕೆ ಗುತ್ತಿಗೆದಾರರಿಂದ ಶೇ.40 ರ ಕಮೀಷನ್ ಆರೋಪ ತೀವ್ರ ಮುಜುಗರಕ್ಕೀಡಾಗುವಂತೆ ಮಾಡಿದ್ದು, ಈಗ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಲ್ಲಿ ಮತ್ತಷ್ಟು ಸಮಸ್ಯೆಯಾಗಲಿದೆ. ಹಾಗಾಗಿ ಯಾವ ರೀತಿ ಮುಂದುವರೆಯಬೇಕು ಎನ್ನುವ ಕುರಿತು ಮಾತುಕತೆ ನಡೆಸಿದರು. ಯಡಿಯೂರಪ್ಪ ಈ ವಿಷಯದಲ್ಲಿ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಕೇಂದ್ರ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಗಟ್ಟಿ ನಿಲುವು ಹೊಂದಿದ್ದು, ಅದನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಈಗ ಎಸಿಬಿ ರದ್ದುಗೊಳಿಸುವ ಆದೇಶ ಪ್ರಶ್ನಿಸಿದಲ್ಲಿ ರಾಷ್ಟ್ರಮಟ್ಟದಲ್ಲಿ ಬಿಜೆಪಿ ವರ್ಚಸ್ಸಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎನ್ನುವ ವಿಷಯ ಚರ್ಚೆ ವೇಳೆ ಬಂದಿದ್ದು, ಹೈಕಮಾಂಡ್ ನಾಯಕರನ್ನೂ ಸಂಪರ್ಕಿಸಿ ಹೈಕೋರ್ಟ್ ತೀರ್ಪಿನ ಕುರಿತು ಮುಂದಿನ ನಡೆ ಕುರಿತು ಸಮಾಲೋಚನೆ ನಡೆಸಲು ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಎಸಿಬಿ ರಚನೆ ರದ್ದುಪಡಿಸಿ ಹೈಕೋರ್ಟ್ ಆದೇಶ