ಬೆಂಗಳೂರು: ನಗರದ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪರಿಣಾಮ ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಮತ್ತೊಂದು ಪೊಲೀಸ್ ಠಾಣೆ ಕಾರ್ಯಾರಂಭಗೊಂಡಿದೆ. ನೂತನವಾಗಿ ನಾಗವಾರ ರಸ್ತೆಯಲ್ಲಿರುವ ಗೋವಿಂದಪುರ ಪೊಲೀಸ್ ಠಾಣೆಯನ್ನು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದು ಉದ್ಘಾಟಿಸಿದರು.
ಠಾಣೆ ಉದ್ಘಾಟನೆ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ಬೆಂಗಳೂರು ದಿನದಿಂದ ದಿನಕ್ಕೆ ಬೆಳವಣಿಗೆ ಆಗುತ್ತಿದೆ. ಭೂ ಪ್ರದೇಶವೂ ಜಾಸ್ತಿಯಾಗುತ್ತಿದೆ. ಪೊಲೀಸ್ ಆಡಳಿತ ಫುನರ್ ವಿಂಗಡನೆ ಆಗಬೇಕಿದೆ. ಡ್ರಗ್ಸ್, ದರೋಡೆ ಹಾಗೂ ಮಹಿಳೆಯರ ಮೇಲೆ ಆತ್ಯಾಚಾರ ಮುಂತಾದ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಅಪರಾಧ ಸಂಖ್ಯೆ ಹೆಚ್ಚಾದಂತೆ ಅಪರಾಧಗಳ ಸ್ವರೂಪ ಬದಲಾಗುತ್ತಿದೆ. ಹೊಸ ಹೊಸ ಸವಾಲುಗಳಿಗೆ ಪೊಲೀಸರನ್ನು ಅಣಿಗೊಳಿಸಬೇಕಿದೆ. ಇದಕ್ಕಾಗಿ ಸೈಬರ್ ತಂತ್ರಜ್ಞಾನ ಸೇರಿದಂತೆ ಆಧುನಿಕ ರೀತಿಯ ತರಬೇತಿ ನೀಡುವುದು ಅಗತ್ಯ. ಈ ಹಿನ್ನೆಲೆ ಒಂದೂವರೆ ವರ್ಷದೊಳಗೆ 16 ಸಾವಿರ ಪೊಲೀಸ್ ಸಿಬ್ಬಂದಿ ನೇಮಕಾತಿ ಮಾಡಲಾಗುವುದು ಎಂದರು.
ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಗೋವಿಂದಪುರ ಪೊಲೀಸ್ ಠಾಣೆ ಸಹಕಾರಿಯಾಗಲಿದೆ. ಸದ್ಯ ಬಾಡಿಗೆ ಕಟ್ಟಡದಲ್ಲಿ ನೂತನ ಠಾಣೆ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವೈಯಾಲಿಕಾವಲ್ ಸೊಸೈಟಿಯಲ್ಲಿ ನಾಗರಿಕ ನಿವೇಶನ (ಸಿಎ) ನೀಡುವುದಾಗಿ ಅಧ್ಯಕ್ಷ ವಿಶ್ವನಾಥ್ ಭರವಸೆ ನೀಡಿದ್ದಾರೆ. ನಿವೇಶನ ದೊರೆತ ಬಳಿಕ ಮುಂದಿನ ಬಜೆಟ್ನಲ್ಲಿ ಅನುದಾನ ಮೀಸಲಿರಿಸಿ, ಸುಸಜ್ಜಿತ ಪೊಲೀಸ್ ಠಾಣೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.