ಕರ್ನಾಟಕ

karnataka

ETV Bharat / city

ಉಪಚುನಾವಣೆ ಸೋಲು.. ಸಿಎಂ ಬೊಮ್ಮಾಯಿಗಿಲ್ಲ ಸೆಂಚ್ಯೂರಿ ಸಂಭ್ರಮ!

ಸಿಂಪಲ್ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಇಂದಿಗೆ ನೂರು ದಿನ. ಆದ್ರೆ ಉಪ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಲ್ಲಿನ ಸೋಲು ಅವರ ಸೆಂಚ್ಯೂರಿ ಸಂಭ್ರಮಕ್ಕೆ ಅಡ್ಡಿಯಾದಂತಾಗಿದೆ.

cm
cm

By

Published : Nov 4, 2021, 5:05 PM IST

Updated : Nov 4, 2021, 5:32 PM IST

ಬೆಂಗಳೂರು: ಬಿಜೆಪಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಯಿಂದ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಗಿ ಬಂತು. ಮುಂದಿನ ಮುಖ್ಯಮಂತ್ರಿ ಯಾರೆಂಬ ಕುತೂಹಲ ಪಕ್ಷ ಹಾಗೂ ರಾಜ್ಯದ ಜನತೆಯಲ್ಲಿ ಮೂಡಿತ್ತು. ಅನೇಕ ಹೆಸರುಗಳು ಸಹ ಮುನ್ನೆಲೆಗೆ ಬಂದಿದ್ದವು. ಆದರೆ, ಆಶ್ಚರ್ಯಕರ ರೀತಿಯಲ್ಲಿ ದೆಹಲಿ ವರಿಷ್ಠರು ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಗದ್ದುಗೆಯಲ್ಲಿ ಕೂರಿಸಿದರು. ಬಿಎಸ್​ವೈ ಸೇರಿದಂತೆ ಕೆಲವೇ ಮಂದಿಗೆ ಈ ಮಾಹಿತಿ ತಿಳಿದಿತ್ತು. ಉಳಿದೆಲ್ಲರಿಗೂ ಆಶ್ಚರ್ಯ ಉಂಟು ಮಾಡಿತ್ತು.

ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಕೆಲಸ ಆರಂಭಿಸಿ ಇಂದಿಗೆ ನೂರು ದಿನ ಪೂರೈಸಿದ್ದಾರೆ. ಮುಖ್ಯಮಂತ್ರಿ ಆದ ಆರಂಭದ ದಿನಗಳಲ್ಲಿ ಪೊಲೀಸ್ ಗೌರವ ವಂದನೆ ಇಡೀ ದಿನ ಮಾಡಬಾರದು, ದಿನಕ್ಕೆ ಒಮ್ಮೆ ಮಾತ್ರ ಮಾಡಿ ಎಂದು ಆದೇಶಿಸಿದ್ದ ಸಿಎಂ, ನಂತರ ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ತ್ಯಜಿಸಿ ಸಿಗ್ನಲ್ ಫ್ರೀ ವ್ಯವಸ್ಥೆ ಬಳಸಿ ಸಂಚರಿಸುವ ಮೂಲಕ ಸರಳತೆ ಮೆರೆದಿದ್ದರು. 'ಸಿಂಪಲ್ ಸಿಎಂ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬೊಮ್ಮಾಯಿ ಅವರ ಸರಳತೆ ದೆಹಲಿ ವರಿಷ್ಠರನ್ನು ಆಕರ್ಷಿಸಿದ್ದು ಸುಳ್ಳಲ್ಲ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ ಎನ್ನುವ ಘೋಷಣೆ ಸಹ ಮಾಡಿದ್ದರು. ಇದು ರಾಜ್ಯದ ಹಲವು ನಾಯಕರಿಗೆ ನುಂಗಲಾರದ ತುತ್ತಾದರೂ ಹೈಕಮಾಂಡ್ ವಿರುದ್ಧ ದನಿ ಎತ್ತಲು ಸಾಧ್ಯವಾಗದೇ ಒಳ ಒಳಗೆ ಬುಸುಗುಟ್ಟುವಂತಾಗಿದೆ.

ನೂರು ದಿನದ ಆಡಳಿತದಲ್ಲಿ ಅಷ್ಟಾಗಿ ಬೊಮ್ಮಾಯಿ ಸರ್ಕಾರ ವೈಫಲ್ಯ ಕಂಡಿಲ್ಲವಾದರೂ, ಪಕ್ಷದಲ್ಲಿ ಅಸಮಾಧಾನದ ಹೊಗೆಯಂತೂ ಆಡುತ್ತಿದೆ ಎಂದು ಹೇಳಲಾಗುತ್ತಿದೆ. ಅಸಮಾಧಾನವನ್ನು ತಕ್ಕಮಟ್ಟಿಗೆ ನಿಯಂತ್ರಿಸುತ್ತಿರುವುದಾದರೂ, ಅಸಮಾಧಾನ ಪರಿಹರಿಸುವಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮಾತಿಗೆ ಹೆಚ್ಚು ಬಲವಿದೆ ಎಂಬುದು ಗೊತ್ತಿರುವ ವಿಚಾರ. ಆನಂದ್ ಸಿಂಗ್ ಹಾಗೂ ಎಂಟಿಬಿ ನಾಗರಾಜ್ ಅವರ ಮುನಿಸನ್ನು ತಣಿಸುವಲ್ಲಿ ಬೊಮ್ಮಾಯಿ ಅವರು ವಿಫಲರಾಗಿದ್ದರು. ಆಗ ಮುಖ್ಯಮಂತ್ರಿಗಳ ನೆರವಿಗೆ ಬಂದಿದ್ದೇ ಯಡಿಯೂರಪ್ಪ. ಎಲ್ಲವನ್ನೂ ಸಮಾಧಾನಕರವಾಗಿ ನಿಭಾಯಿಸಿದರು. ಹಾಗಾಗಿ, ಯಡಿಯೂರಪ್ಪ ಅವರ ಸಹಕಾರ ಎಲ್ಲಿಯ ತನಕ ಇರುತ್ತದೋ ಅಲ್ಲಿಯವರೆಗೆ ರಾಜ್ಯ ಬಿಜೆಪಿ ಸರ್ಕಾರ ಸದೃಢವಾಗಿರುತ್ತದೆ ಎಂಬ ಚರ್ಚೆಗಳು ಬಿಜೆಪಿ ಅಂಗಳದಲ್ಲೇ ನಡೆಯುತ್ತಿವೆ.

ಕೋವಿಡ್ ನಿಯಂತ್ರಣ ಸೇರಿದಂತೆ ಹಲವು ವಿಚಾರದಲ್ಲಿ ಉತ್ತಮವಾಗಿಯೇ ಕಾರ್ಯ ನಿರ್ವಹಿಸಿದ್ದಾರೆ. ಖ್ಯಾತ ನಟ ಪುನೀತ್ ರಾಜ್‍ಕುಮಾರ್ ನಿಧನದ ದಿನದಿಂದ ಹಿಡಿದು ಅವರ ಅಂತ್ಯಕ್ರಿಯೆ ಮುಗಿಯುವವರೆಗೂ ಯಾವುದೇ ಘಟನೆಗೆ ಅವಕಾಶ ಕೊಡದೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿ ರಾಜ್ಯದ ಜನರ ಮೆಚ್ಚುಗೆಗೆ ಬೊಮ್ಮಾಯಿ ಪಾತ್ರರಾಗಿದ್ದಾರೆ.

ಉಪಚುನಾವಣೆಯಲ್ಲಿ ಎಡವಿದ ಸಿಎಂ: ತಮ್ಮ ನಾಯಕತ್ವದಲ್ಲಿ ಎದುರಿಸಿದ ಮೊದಲ ಉಪಚುನಾವಣೆಯಲ್ಲಿ ತವರು ಜಿಲ್ಲೆಯಲ್ಲೇ ಪಕ್ಷ ಮುಗ್ಗರಿಸಿರುವುದು ಬಸವರಾಜ ಬೊಮ್ಮಾಯಿ ನಾಯಕತ್ವವನ್ನು ಪಕ್ಷದೊಳಗೆ ಪ್ರಶ್ನಿಸಲು ಅವಕಾಶ ಮಾಡಿಕೊಟ್ಟಂತಾಗಿದೆ. ಒಂದು ಕ್ಷೇತ್ರದಲ್ಲಿ ಗೆದ್ದರೂ ತವರು ಕ್ಷೇತ್ರದಲ್ಲೇ ಎಡವಿದ್ದು, ನೂರು ದಿನದ ಸಾಧನೆಯನ್ನು ಹೇಳಿಕೊಳ್ಳದ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಪಕ್ಷದೊಳಗೆ ನಾಯಕತ್ವದ ಬಗ್ಗೆ ಚರ್ಚೆ ಆರಂಭವಾಗಿದೆ.

ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಅಲ್ಲದೆ, ಸಿಎಂ ವಿರುದ್ಧ ಮುನಿಸಿಕೊಂಡು ಅಂತರ ಕಾಯ್ದುಕೊಂಡಿರುವ ಬಿಜೆಪಿಯ ಕೆಲ ನಾಯಕರಿಗಿದು ಸಮಾಧಾನ ಉಂಟು ಮಾಡಿದೆ ಎಂದು ಹೇಳಲಾಗುತ್ತಿದೆ. ಬಸವರಾಜ ಬೊಮ್ಮಾಯಿ ಅವರನ್ನು ನಂಬಿ ಮುಂದಿನ ಸಾರ್ವತ್ರಿಕ ಚುನಾವಣೆಗೆ ಹೋಗಲು ಅಸಾಧ್ಯ ಎಂಬ ಸಂದೇಶವನ್ನು ದೆಹಲಿ ವರಿಷ್ಠರಿಗೆ ರವಾನಿಸಲು ಕೆಲವರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಗುಸು ಗುಸು ಪಕ್ಷದಲ್ಲಿ ನಡೆಯುತ್ತಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

(ಇದನ್ನೂ ಓದಿ: 100 ದಿನಗಳ ಸಂಭ್ರಮದಲ್ಲಿರುವ ಬೊಮ್ಮಾಯಿ ಸರ್ಕಾರ ಎದುರಿಸಿದ ಸವಾಲು-ಸಂಕಷ್ಟಗಳು ನೂರೆಂಟು)

Last Updated : Nov 4, 2021, 5:32 PM IST

ABOUT THE AUTHOR

...view details