ಬೆಂಗಳೂರು : ರಾಜ್ಯದ ಶಕ್ತಿ ಕೇಂದ್ರವಾಗಿರುವ ವಿಧಾನಸೌಧದ ಆವರಣದಲ್ಲಿ ಸಮಾನತೆಯ ಹರಿಕಾರ ಜಗಜ್ಯೋತಿ ಬಸವಣ್ಣನವರ ಪುತ್ಥಳಿ ಸ್ಥಾಪಿಸಿ ನಾಡಿನ ಜನತೆಯ ಗಮನ ಸೆಳೆಯುವತ್ತ ಮುಖ್ಯಮಂತ್ರಿ ಯಡಿಯೂರಪ್ಪ ಹೆಜ್ಜೆ ಹಾಕುತ್ತಿದ್ದಾರೆ. ವಿಧಾನಸೌಧದ ಆವರಣದಲ್ಲಿ ಬಸವಣ್ಣನವರ ಪುತ್ಥಳಿ ನಿರ್ಮಾಣ ಮಾಡುವ ಕುರಿತಂತೆ ಕಡತವನ್ನು ಸಿದ್ಧಪಡಿಸಿ ಮಂಡಿಸುವಂತೆ ಮುಖ್ಯಮಂತ್ರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚಿಸಿದ್ದಾರೆ.
ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಟಿಪ್ಪಣಿ ಕಳಿಸಿರುವ ಸಿಎಂ, 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದವರು ಜಗಜ್ಯೋತಿ ಬಸವಣ್ಣನವರಾಗಿದ್ದಾರೆ. ರಾಜ್ಯದಲ್ಲಿ ಪ್ರಜಾಪ್ರಭುತ್ವದ ದೇಗುಲವಾಗಿರುವ ವಿಧಾನಸೌಧದ ಆವರಣದಲ್ಲಿ ಬಸವಣ್ಣನವರ ಪುತ್ಥಳಿ ನಿರ್ಮಿಸುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅದು ಮುಕುಟ ಪ್ರಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಪುತ್ಥಳಿ ಸ್ಥಾಪನೆ ಸಂಬಂಧ ಸೂಕ್ತ ಪ್ರಸ್ಥಾವನೆಯೊಂದಿಗೆ ಕಡತ ಮಂಡಿಸುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕಳಿಸಿದ ಟಿಪ್ಪಣಿಯಲ್ಲಿ ಸಿಎಂ ಸೂಚಿಸಿದ್ದಾರೆ.
ಕೋವಿಡ್ ನಿಯಂತ್ರಣ ಮತ್ತು ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆಯ ನಡುವೆಯೇ ವಿಭಿನ್ನವಾಗಿ ಯೋಚಿಸುತ್ತಿರುವ ಮುಖ್ಯಮಂತ್ರಿ ಬಿಎಸ್‌ವೈ, ವಿಧಾನಸೌಧದ ಆವರಣದಲ್ಲಿ ಬಸವೇಶ್ವರರ ಪುತ್ಥಳಿ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಮತ್ತೊಂದು ಬಲವಾದ ರಾಜಕೀಯ ಸಂದೇಶವನ್ನು ರವಾನಿಸಲು ಸಿದ್ದರಾಗಿದ್ದಾರೆ.