ಬೆಂಗಳೂರು : ನಗರದ ಕೆ.ಆರ್.ಪುರ ಹೋಬಳಿಯ ಬಸವನಪುರ ಕೆರೆ ಪ್ರದೇಶದ ಒತ್ತುವರಿಯನ್ನು ತೆರವು ಮಾಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಈ ಕುರಿತು ಬಸವನಪುರ ಗ್ರಾಮದ ನಿವಾಸಿ ಎ. ವೇಲು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ನಗರ ಜಿಲ್ಲಾಧಿಕಾರಿ, ಬಿಬಿಎಂಪಿ ಆಯುಕ್ತರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜ. 21ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದಿಸಿ, ಕೆ.ಆರ್.ಪುರ ಹೋಬಳಿಯ ಬಸವನಪುರ ಕೆರೆ ಜಾಗವನ್ನು ದಿ ಎಸ್‌ಇಎ ಗ್ರೂಪ್ ಆಫ್ ಕಾಲೇಜ್ ಎಜುಕೇಷನಲ್ ಇನ್ಸ್‌ಟಿಟ್ಯೂಟ್ ಒತ್ತುವರಿ ಮಾಡಿದೆ. ಬೆಂಗಳೂರು ನಗರ ಪೂರ್ವ ತಾಲೂಕು ತಹಶೀಲ್ದಾರ್, ಕೆರೆ ಪ್ರದೇಶವಾದ 14 ಎಕರೆ 7 ಗುಂಟೆಯನ್ನು ಸರ್ವೇ ನಡೆಸಿದ್ದಾರೆ. ನಂತರ ಒತ್ತುವರಿ ಮಾಡಲಾಗಿರುವ 29 ಗುಂಟೆ ಜಾಗವನ್ನು ತೆರವುಗೊಳಿಸುವಂತೆ 2011ರ ನ.26ರಂದು ಕಾಲೇಜಿಗೆ ನಿರ್ದೇಶಿಸಿದ್ದಾರೆ. ಆದರೆ, ಕಾಲೇಜು ಈವರೆಗೂ ಒತ್ತುವರಿ ತೆರವುಗೊಳಿಸಿಲ್ಲ ಎಂದು ತಿಳಿಸಿದರು.