ಬೆಂಗಳೂರು:ಮನೆಯಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ತೆರಳಿ ವಾಪಸ್ಸಾಗುಷ್ಟರಲ್ಲಿ ಮನೆಯಲ್ಲಿದ್ದ ನಗ ನಾಣ್ಯ ದೋಚುತ್ತಿದ್ದ ಖತರ್ನಾಕ್ ಕಳ್ಳನನ್ನು ಬೆಂಗಳೂರು ಗ್ರಾಮಾಂತರ ಅವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಶ್ರೀರಾಮಪುರದ ನಿವಾಸಿ ಮುನಿರಾಜು ಬಂಧಿತ ಕಳ್ಳ. ಬಂಧಿತನಿಂದ 27 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಹಲವು ಠಾಣೆಗಳಲ್ಲಿ ಇಂತಹುದೇ ಪ್ರಕರಣ ಸಂಬಂಧ ಈತನ ಮೇಲೆ ದೂರುಗಳು ದಾಖಲಾಗಿದ್ದವು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ರಾಮನಿವಾಸ್ ಸೆಪಟ್ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಅವಲಹಳ್ಳಿ ಪೊಲೀಸರಿಂದ ಕಳ್ಳನ ಬಂಧನ ಸಾವಿನ ಮನೆಯನ್ನೂ ಬಿಡಲಿಲ್ಲ ಖದೀಮ:
ಸತ್ತವರಿಗೆ ಚಟ್ಟ ಕಟ್ಟುವ ಅಂಗಡಿಯವನ ಸಂಪರ್ಕ ಇಟ್ಟುಕೊಂಡಿದ್ದ ಮುನಿರಾಜು, ಅವರ ಮೂಲಕ ತನ್ನ ಕೈಚಳಕ ತೋರಿಸುತ್ತಿದ್ದ. ಸತ್ತವರ ಅಂತ್ಯಕ್ರಿಯೆ ನೆರವೇರಿಸಲು ಸ್ಮಶಾನಕ್ಕೆ ತೆರಳುವುದನ್ನೇ ಕಾಯುತ್ತಿದ್ದ ಇವನು, ತಕ್ಷಣ ಮನೆಗೆ ನುಗ್ಗಿ ನಗದು, ಚಿನ್ನಾಭರಣಗಳನ್ನು ದೋಚಿ ಎಸ್ಕೇಪ್ ಆಗುತ್ತಿದ್ದ.
ಬೆಂಗಳೂರು ಗ್ರಾಮಾಂತರದ ನೆಲಮಂಗಲ, ಮಾದನಾಯಕನಹಳ್ಳಿ ಹಾಗೂ ಬೆಂಗಳೂರು ಹೊರವಲಯ ಅವಲಹಳ್ಳಿ ಸೇರಿ ಹಲವೆಡೆ ಇದೇ ರೀತಿಯ 9 ಪ್ರಕರಣಗಳು ದಾಖಲಾಗಿದ್ದವು. ಕಳ್ಳನ ಬೆನ್ನತ್ತಿದ್ದ ಅವಲಹಳ್ಳಿ ಪೊಲೀಸರು ಕೊನೆಗೂ ಮುನಿರಾಜುನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಎಸ್ಪಿ ರಾಮನಿವಾಸ್ ಸೆಪಟ್ ಅವಲಹಳ್ಳಿ ಪೊಲೀಸರ ಸಾಧನೆಯನ್ನು ಶ್ಲಾಘಿಸಿ 10 ಸಾವಿರ ರೂ. ಬಹುಮಾನ ನೀಡಿದ್ದಾರೆ.