ಬೆಂಗಳೂರು: ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಚೇಸ್ ಮಾಡಿದ ಪೊಲೀಸರು ಗುಂಡಿನ ದಾಳಿ ನಡೆಸಿ, ಮೂವರು ಖದೀಮರನ್ನು ಬಂಧಿಸಿರುವ ಘಟನೆ ಅನೇಕಲ್ನಲ್ಲಿ ನಡೆದಿದೆ.
ದರೋಡೆ ಮಾಡಲು ಯತ್ನಿಸುತ್ತಿದ್ದ ಗ್ಯಾಂಗ್ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಅನಿವಾರ್ಯವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ದರೋಡೆಕೋರನ ಕಾಲಿಗೆ ಗಾಯವಾಗಿದೆ. ಈ ವೇಳೆ ಮೂವರನ್ನು ಹಿಡಿಯುವಲ್ಲಿ ಪೊಲೀಸರು ಸಫಲರಾಗಿದ್ದಾರೆ ಎಂದು ತಿಳಿದುಬಂದಿದೆ.
ಆನೇಕಲ್ ಪಟ್ಟಣದ ವೆಂಕಟರಾಜು/ತುಕಡಿ (22) , ಗಿರಿಜಾ ಶಂಕರ್ ಬಡಾವಣೆಯ ಅಭಿಲಾಷ್/ಅಭಿ(19) , ಬಿಡದಿಯ ಸಂತೋಷ್(23) ಸಿಕ್ಕಿಬಿದ್ದಿದ್ದು, ಉಳಿದ ನಾಲ್ವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಆಗಿದ್ದೇನು?
ಇದೇ ತಿಂಗಳ 13 ನೇ ತಾರೀಖಿನಂದು ಆನೇಕಲ್-ಹೊಸೂರು ರಸ್ತೆಯ ಹೊಂಪಲಘಟ್ಟ-ಮುತ್ತುಗಟ್ಟೆ ಕ್ರಾಸ್ ಬಳಿ ಏಳು ಮಂದಿಯ ಗ್ಯಾಂಗ್ ದರೋಡೆ ಮಾಡಲು ಹೊಂಚು ಹಾಕಿದ್ದರು. ಈ ಬಗ್ಗೆಮಾಹಿತಿ ಪಡೆದ ಆನೇಕಲ್ ಪಿಎಸ್ಐ ಹೇಮಂತ್ ಕುಮಾರ್, ತಮ್ಮ ಸಿಬ್ಬಂದಿ ಶಿವಣ್ಣ, ಲೋಕೇಶ್, ನರೇಂದ್ರ ಮತ್ತು ಈಶ್ವರ್ ಜತೆ ದಾಳಿ ನಡೆಸಿದ್ದಾರೆ. ಕೂಡಲೇ ಕಾರಿನಲ್ಲಿದ್ದ ಐದು ದರೋಡೆಕೋರರು ಬೈಕ್ನಲ್ಲಿ ಕುಳಿತಿದ್ದ ಇಬ್ಬರು ಪೊಲೀಸರ ಮೇಲೆ ಕಾರು ಹತ್ತಿಸಲು ಮುಂದಾಗಿದ್ದರು. ಈ ವೇಳೆ ಆತ್ಮರಕ್ಷಣೆಗಾಗಿ ಕಾರಿನ ಬಲ ಚಕ್ರಕ್ಕೆ ಎಸ್ಐ ಹೇಮಂತ್ ಗುಂಡು ಹೊಡೆದಿದ್ದಾರೆ ಎನ್ನಲಾಗಿದೆ. ಆರೋಪಿಗಳಿದ್ದ ಕಾರಿನ ಬಾಗಿಲಿಗೆ ಗುಂಡು ಹೊಡೆದಾಗ ಅದು ಚಾಲಕನ ಕಾಲಿಗೆ ತಾಗಿ ಕಾರು ನಿಂತಿದೆ.ಈ ವೇಳೆ ಕಾರಿನಲ್ಲಿದ್ದ ನಾಲ್ವರು ಪರಾರಿಯಾಗಿದ್ದಾರೆ. ಮತ್ತೊಂದು ಕಡೆಯಿಂದ ದಾಳಿ ನಡೆಸಿದ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದರೋಡೆಗೆ ಮುಂದಾದ ಈ ಗುಂಪಿನ ಹಿಂದೆ ದೊಡ್ಡ ಜಾಲವೇ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಮುಂದುವರೆಸಿದ್ದಾರೆ.