ಬೆಂಗಳೂರು : ಇಲ್ಲಿನ ಜಲಮಂಡಳಿಯ ಪ್ರಮುಖ ಆದಾಯ ಮೂಲ ನೀರಿನ ಬಿಲ್. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಜಲಮಂಡಳಿ ದಿನನಿತ್ಯ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತದೆ. ಆದರೆ, ಬೆಂಗಳೂರು ಜಲಮಂಡಳಿಗೆ ಪಾವತಿ ಬಾಕಿಯೇ ದೊಡ್ಡ ತಲೆನೋವಾಗಿದೆ. ವಿಪರ್ಯಾಸ ಅಂದರೆ ಜಲಮಂಡಳಿಗೆ ನೀರಿನ ಬಿಲ್ ಪಾವತಿಸದೇ ಇರುವವರ ಪೈಕಿ ಸರ್ಕಾರಿ ಇಲಾಖೆಗಳೇ ಅಗ್ರಗಣ್ಯ.
ಜಲಮಂಡಳಿ ವಾರ್ಷಿಕ ಸುಮಾರು 200 ಕೋಟಿ ಆದಾಯ ಕೊರತೆಯನ್ನು ಎದುರಿಸುತ್ತಿದೆ. ಸುಮಾರು 500 ಕೋಟಿ ರೂಪಾಯಿ ವಿದ್ಯುತ್ ಬಿಲ್ ರೂಪದಲ್ಲಿ ಪಾವತಿಸುತ್ತದೆ. ತನ್ನ ಪ್ರಮುಖ ಆದಾಯ ಸಂಗ್ರಹದಲ್ಲಿ ಸುಮಾರು 80ಶೇ. ನೀರಿನ ಬಿಲ್ ಸಂಗ್ರಹದ ಮೂಲಕ ಬರುತ್ತದೆ. ಪರಿಸ್ಥಿತಿ ಹೀಗಿದ್ದಾಗ ಸರ್ಕಾರಿ ಇಲಾಖೆಗಳೇ ಕೋಟ್ಯಾಂತರ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿರುವುದು ವಿಪರ್ಯಾಸವೇ ಸರಿ. ಅದೆಷ್ಟು ನೋಟಿಸ್ ನೀಡಿದರೂ ಅದಕ್ಕೆ ಕ್ಯಾರೇ ಅನಿಸುತ್ತಿಲ್ಲ.
ಸರ್ಕಾರಿ ಇಲಾಖೆಗಳಿಂದ ಬರೋಬ್ಬರಿ 147 ಕೋಟಿ ಬಾಕಿ :ಜಲಮಂಡಳಿಗೆ ನೀರಿನ ಬಿಲ್ ಕಟ್ಟದೇ ಇರುವವರ ಪೈಕಿ ಸರ್ಕಾರಿ ಇಲಾಖೆಗಳದ್ದೇ ದೊಡ್ಡ ಪಾಲಿದೆ. ಸಾಮಾನ್ಯವಾಗಿ ನೀರಿನ ಬಿಲ್ ಕಟ್ಟದೇ ಇದ್ದರೆ ಮರುದಿನವೇ ಜನಸಾಮಾನ್ಯನ ಮನೆ ಬಾಗಿಲಿಗೆ ಬರುವ ಜಲಮಂಡಳಿ, ಅದೇ ಕೋಟ್ಯಂತರ ರೂಪಾಯಿ ಬಾಕಿ ಬಿಲ್ ಉಳಿಸಿರುವ ಸರ್ಕಾರಿ ಇಲಾಖೆಗಳ ಬಗ್ಗೆ ಮಾತ್ರ ಕೈಕಟ್ಟಿ ನಿಂತಿದೆ.
ಜಲಮಂಡಳಿ ನೀಡಿದ ಅಂಕಿ-ಅಂಶದ ಪ್ರಕಾರ ಬೆಂಗಳೂರಿನಲ್ಲಿರುವ ವಿವಿಧ ಸರ್ಕಾರಿ ಇಲಾಖೆಗಳು ಈವರೆಗೆ ಬರೋಬ್ಬರಿ 147.50 ಕೋಟಿ ರೂ. ನೀರಿನ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದೆ. ಹಲವು ವರ್ಷಗಳಿಂದ ವಿವಿಧ ಸರ್ಕಾರಿ ಇಲಾಖೆಗಳು ನೀರಿನ ಬಿಲ್ಲನ್ನು ಬಾಕಿ ಉಳಿಸಿಕೊಂಡಿದೆ. ವಿವಿಧ ಸರ್ಕಾರಿ ಇಲಾಖೆಗಳು ಮೇ ತಿಂಗಳ 7.06 ಕೋಟಿ ರೂ. ಬಿಲ್ ಕಟ್ಟಬೇಕಾಗಿದೆ. ಅದೆಷ್ಟು ಬಾರಿ ನೋಟಿಸ್ ಜಾರಿ ಮಾಡಿದರೂ ಬಿಲ್ ಮಾತ್ರ ಪಾವತಿಯಾಗುತ್ತಿಲ್ಲ. ವರ್ಷಂಪ್ರತಿ ಸರ್ಕಾರಿ ಇಲಾಖೆಗಳ ಬಾಕಿ ಬಿಲ್ ಮೊತ್ತ ಬೆಟ್ಟದಷ್ಟು ಬೆಳಿತಾನೇ ಇದೆ.