ಬೆಂಗಳೂರು: ಸಿಂಡಿಕೇಟ್ ಸದಸ್ಯರೊಂದಿಗೆ ಚರ್ಚಿಸದೇ 28 ಕೋಟಿ ರೂ. ಮೊತ್ತದ ಬಿಲ್ಗೆ ರಾತ್ರೋರಾತ್ರೀ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ವೇಣುಗೋಪಾಲ್ ಕೆ.ಆರ್. ಹಣಕಾಸು ವಿಭಾಗದ ಅಧಿಕಾರಿ ಅನುಮೋದನೆ ಕೊಟ್ಟಿದ್ದಾರೆ ಎಂದು ಆರೋಪಿಸಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯನ್ನ ವಾಪಸ್ ಪಡೆದಿದ್ದಾರೆ.
ಮೇ 27 ರಂದು ಹಣಕಾಸು ಅಧಿಕಾರಿ ಜಯಲಕ್ಷ್ಮಿ, ತಮ್ಮ ವಿರುದ್ಧ ಮುಷ್ಕರ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಏಕವಚನದಲ್ಲಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಮೇಲೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹೀಗಾಗಿ, ಮೇ 30 ರಂದು ಬೆಂಗಳೂರು ವಿಶ್ವವಿದ್ಯಾಲಯ ಬಂದ್ ಮಾಡಿ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಜೊತೆಗೆ ವಿದ್ಯಾರ್ಥಿಗಳ ಮೇಲಿನ ಎಫ್ಐಆರ್ ಹಿಂಪಡೆಯಲು ಒತ್ತಾಯಿಸಿದ್ದರು.