ಬೆಂಗಳೂರು: ನಗರದ ಬೆಂಗಳೂರು ಟರ್ಫ್ ಕ್ಲಬ್, ಮೈಸೂರು ಟರ್ಫ್ ಕ್ಲಬ್ ಸೇರಿದಂತೆ ಸರ್ಕಾರಿ ಭೂಮಿಯನ್ನು ರಿಯಾಯಿತಿ ದರದಲ್ಲಿ ಗುತ್ತಿಗೆ ಪಡೆದಿರುವ ಸಂಸ್ಥೆಗಳು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಮಾಹಿತಿ ನೀಡುವ ಉತ್ತರದಾಯಿತ್ವವನ್ನು ಹೊಂದಿವೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕ್ಲಬ್ಗಳಿಗೆ ಸಂಬಂಧಿಸಿದಂತೆ ಅರ್ಜಿದಾರರು ಕೋರಿರುವ ಮಾಹಿತಿ ನೀಡಲು ಆದೇಶಿಸಿದ್ದ ರಾಜ್ಯ ಮಾಹಿತಿ ಆಯೋಗದ ಕ್ರಮ ಪ್ರಶ್ನಿಸಿ ಬೆಂಗಳೂರು ಟರ್ಫ್ ಕ್ಲಬ್, ಮೈಸೂರು ಟರ್ಫ್ ಕ್ಲಬ್, ಲೇಡಿಸ್ ಕ್ಲಬ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ.ಪಿ.ಬಿ. ಭಜಂತ್ರಿ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಸರ್ಕಾರ ಈ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಭೂಮಿ ಗುತ್ತಿಗೆ ನೀಡಿದೆ. ಸರ್ಕಾರಿ ಭೂಮಿ ಸಾರ್ವಜನಿಕರ ಭೂಮಿ ಇದ್ದಂತೆ. ಇಂತಹ ಭೂಮಿಯನ್ನು ಸರ್ಕಾರ ಮಾರುಕಟ್ಟೆ ಮೌಲ್ಯಕ್ಕಿಂತ ಸಾಕಷ್ಟು ಕಡಿಮೆ ಬಾಡಿಗೆಗೆ ಗುತ್ತಿಗೆ ನೀಡಿದೆ. ಈ ಮೂಲಕ ಪರೋಕ್ಷವಾಗಿ ರಿಯಾಯಿತಿ ನೀಡಿದ್ದು, ಭೂಮಿ ಗುತ್ತಿಗೆ ಪಡೆದವರು ಜನರಿಗೆ ಉತ್ತರದಾಯಿಯಾಗುತ್ತಾರೆ. ಹೀಗಾಗಿ, ಈ ಸಂಸ್ಥೆಗಳನ್ನು ಸಾರ್ವಜನಿಕ ಪ್ರಾಧಿಕಾರಗಳಂತೆ ಪರಿಗಣಿಸಬಹುದಾಗಿದೆ. ಅದರಂತೆ ಸಾರ್ವಜನಿಕರು ಆರ್ಟಿಐ ಕಾಯ್ದೆಯಡಿ ಮಾಹಿತಿ ಪಡೆಯಬಹುದು ಎಂದು ಆದೇಶಿಸಿದೆ. ಈ ಮೂಲಕ ಮಾಹಿತಿ ನೀಡುವಂತೆ ಆದೇಶಿಸಿದ್ದ ಮಾಹಿತಿ ಆಯೋಗದ ಆದೇಶವನ್ನು ಎತ್ತಿ ಹಿಡಿದಿದೆ.