ಬೆಂಗಳೂರು: ಕೊರೊನಾ ಹರಡುವಿಕೆ ಹಿನ್ನೆಲೆ ಬಸ್ ಸಂಚಾರ ಸೇರಿದಂತೆ ಎಲ್ಲಾ ವಾಹನ ಸಂಚಾರ ಬಂದ್ ಆಗಿತ್ತು. ಇದೀಗ ಸೋಂಕು ನಿಯಂತ್ರಣಕ್ಕೆ ಬಂದಿರುವ ಕಾರಣಕ್ಕೆ ಆನ್ ಲಾಕ್ ಮಾಡಲಾಗಿದ್ದು, ಇಂದಿನಿಂದ ಬಸ್ಸು, ಮೆಟ್ರೋ, ಆಟೋ ಸೇರಿದಂತೆ ಎಲ್ಲ ಸಾರಿಗೆ ಸೇವೆಗಳು ಪ್ರಾರಂಭವಾಗಿದೆ.
ಅಂದಹಾಗೇ, ಇಂದು ನಮ್ಮ ಮೆಟ್ರೋ ಸೇವೆಯು 55 ದಿನಗಳ ನಂತರ ಓಡಾಟ ನಡೆಸಿತ್ತು. ಪೂರ್ಣ ಪ್ರಮಾಣದಲ್ಲಿ ಓಡಾಟಕ್ಕೆ ಬ್ರೇಕ್ ಹಾಕಿರುವ ನಿಗಮ ಎರಡು ಹಂತದಲ್ಲಿ ಕಾರ್ಯಾಚರಣೆ ನಡೆಸ್ತು. ಬೆಳಗ್ಗೆ 7-11 ಗಂಟೆಗೊಂದು ಮಧ್ಯಾಹ್ನ 3ರಿಂದ ಸಂಜೆ 6 ಗಂಟೆ ತನಕ ಸೇವೆ ನೀಡಲಾಗಿತ್ತು. ಈ ಎರಡು ಸಮಯದಲ್ಲಿ 160 ರೌಂಡ್ ಟ್ರಿಪ್ಸ್ಗಳನ್ನ ನಡೆಸಲಾಗಿದ್ದು, ಸುಮಾರು 24,602 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ.
ಇಂದಿನಿಂದ ಕೆಎಸ್ಆರ್ಟಿಸಿ ರಾತ್ರಿ ಸೇವೆ
ಇಂದಿನಿಂದ ಕೆಎಸ್ಆರ್ಟಿಸಿ ಬಸ್ಗಳು ಓಡಾಟ ನಡೆಸಿದ್ದು, ಮೈಸೂರು ಹಾಗೂ ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಮಾತ್ರ ಸೇವೆಗೆ ಬ್ರೇಕ್ ಹಾಕಲಾಗಿತ್ತು. ಸಂಜೆ 7 ಗಂಟೆ ತನಕ ವಿವಿಧ ಭಾಗಗಳಿಂದ 2,646 ಬಸ್ಗಳ ಕಾರ್ಯಾಚರಣೆ ಪ್ರಾರಂಭವಾಗಿದೆ. ಕೆಎಸ್ಆರ್ಟಿಸಿ ಬಸ್ಗಳು ರಾತ್ರಿ ಕಾರ್ಯಾಚರಣೆಯು ಸಾಮಾನ್ಯವಾಗಿ ಇರಲಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.
ಹಾಗೆಯೇ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೂ ಬಸ್ ಸಂಚಾರ ಆರಂಭವಾಗಿದ್ದು, ಶೇ.50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಕಾರಣಕ್ಕೆ ಅಂತರ್ ರಾಜ್ಯ ಸಂಚಾರ ಸ್ಥಗಿತಗೊಳಿಸಿತ್ತು. ಇದೀಗ ಹಂತ ಹಂತವಾಗಿ ಆಯಾ ರಾಜ್ಯಗಳ ಮಾರ್ಗಸೂಚಿಯಂತೆ ಬಸ್ ಸಂಚಾರ ಕಲ್ಪಿಸಲಾಗುತ್ತಿದೆ.
ರಾಜಧಾನಿಯಲ್ಲಿ 3000ಕ್ಕೂ ಅಧಿಕ ಬಸ್ಸುಗಳ ಕಾರ್ಯಾಚರಣೆ
ಮುಂಜಾನೆ 6 ಗಂಟೆಗೆ ಬಿಎಂಟಿಸಿ ಬಸ್ ರೋಡಿಗಿಳಿತಾದರೂ ಜನರ ಸಂದಣೆ ನಿಯಂತ್ರಿಸಲು ಸಾಹಸ ಪಡಬೇಕಾಯ್ತು. ರೈಲ್ವೆ ನಿಲ್ದಾಣದಿಂದ ಜನರು ದಿಢೀರ್ ಆಗಮಿಸಿದ ಪರಿಣಾಮ, ಸರಿಯಾದ ಸಮಯಕ್ಕೆ ಬಸ್ಗಳು ಸಿಗದೇ ಪರದಾಡಬೇಕಾಯ್ತು.. ಇಂದು ಬೆಳಗ್ಗೆ 6 ಗಂಟೆಯಿಂದ 7 ಗಂಟೆ ತನಕ 3,154 ಬಸ್ಗಳು ಕಾರ್ಯಾಚರಣೆ ಆಗಿವೆ.