ಬೆಂಗಳೂರು: ಆಂಧ್ರ ಪ್ರದೇಶದಿಂದ ಗಾಂಜಾ ತರಿಸಿಕೊಂಡು ನಗರದಲ್ಲಿ ಅವ್ಯಾಹತವಾಗಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ ಆಟೋ ಚಾಲಕ ಸೇರಿದಂತೆ ಇಬ್ಬರು ದಂಧೆಕೋರರನ್ನು ಶ್ರೀರಾಮಪುರ ಪೊಲೀಸರು ಬಂಧಿಸಿದ್ದಾರೆ.
ಶ್ರೀರಾಮಪುರದ ಅಂಬೇಡ್ಕರ್ ನಗರದ ನಿವಾಸಿ ಸತೀಶ್ ಹಾಗೂ ವಸಂತ್ ಬಂಧಿತರು. ದಂಧೆಕೋರರಿಂದ 45 ಕೆಜಿ ಗಾಂಜಾ ಹಾಗೂ ಆಟೋ ಜಪ್ತಿ ಮಾಡಲಾಗಿದೆ. ಆಟೋ ಚಾಲಕ ಸತೀಶ್ ವಿಶಾಖಪಟ್ಟಣದಿಂದ ಪರಿಚಯಸ್ಥರಿಗೆ ಮುಂಗಡ ಹಣ ನೀಡಿ ಅಲ್ಲಿಂದ ಲಗೇಜ್ ಮಾದರಿಯಲ್ಲಿ ಗಾಂಜಾ ಪ್ಯಾಕ್ ಮಾಡಿ ಅಪರಿಚಿತ ಪ್ರಯಾಣಿಕರಿಗೆ ಹಣದ ಆಸೆ ತೋರಿಸಿ ಬೆಂಗಳೂರಿಗೆ ತರಿಸುತ್ತಿದ್ದನಂತೆ.
ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ ಓದಿ-ಹುಬ್ಬಳ್ಳಿಯಲ್ಲಿ ಹಿಂದಿನ ಕಾಲುಗಳ ಸ್ವಾಧೀನ ಕಳೆದುಕೊಂಡ ಬೀದಿನಾಯಿ... ಈ ಯುವಕ ಮಾಡಿದ್ದೇನು ನೀವೇ ನೋಡಿ!
ದಂಧೆ ಬಗ್ಗೆ ಯಾರಿಗೂ ಗುಮಾನಿ ಬಾರದಿರಲು 'ಮ್ಯಾಂಗೊ' ಎಂಬ ಕೋರ್ಡ್ ವರ್ಡ್ ಇಟ್ಟಿದ್ದ. ಬೆಂಗಳೂರಿಗೆ ಗಾಂಜಾ ತಲುಪುತ್ತಿದ್ದಂತೆ ಗಾಂಜಾ ಸ್ವೀಕರಿಸುತ್ತಿದ್ದ ಸತೀಶ್, ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಆಟೋದಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿರುವುದಾಗಿ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸತೀಶ್ ವಿರುದ್ಧ ಗಾಂಜಾ ಸರಬರಾಜು, ಸುಲಿಗೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ.