ಬೆಂಗಳೂರು :ನಗರದ ಕಸ ನಿರ್ವಹಣೆಯನ್ನು ಸರಿಪಡಿಸಲು ಬಿಬಿಎಂಪಿ ನಾನಾ ಕಸರತ್ತುಗಳನ್ನು ನಡೆಸುತ್ತಿದೆ. ಹೊಸ ಟೆಂಡರ್ ಕರೆದರೂ, ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಬರುತ್ತಿಲ್ಲ. ಸದ್ಯ ಇದನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಿ ವ್ಯವಸ್ಥಿತವಾಗಿ ತ್ಯಾಜ್ಯ ನಿರ್ವಹಣೆ ಮಾಡಲು ಸರ್ಕಾರ ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಎಂಬ ಪ್ರತ್ಯೇಕ ಕಂಪನಿಯನ್ನು ರಚಿಸಿದೆ.
ಜುಲೈ 1ರಿಂದಲೇ ನಗರ ಹಾಗೂ ಜಿಲ್ಲಾ ವ್ಯಾಪ್ತಿಯ ಎಲ್ಲಾ ಕಸ ನಿರ್ವಹಣೆ ಜವಾಬ್ದಾರಿಯನ್ನು ಈ ಕಂಪನಿ ನೋಡಿಕೊಳ್ಳಲಿದ್ದು, ಬಿಬಿಎಂಪಿಯ ಬಹುದೊಡ್ಡ ಜವಾಬ್ದಾರಿ ಈ ಮೂಲಕ ಕಳಚಿಕೊಳ್ಳಲಿದೆ. ಈಗಾಗಲೇ ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಅಧಿಕಾರಿಗಳು, ಸಿಬ್ಬಂದಿಯ ಪಟ್ಟಿ ಮತ್ತು ಒಪ್ಪಂದಗಳ ಪ್ರತಿ, ಗುತ್ತಿಗೆಗಳು ಹಾಗೂ ಕೆಲಸ ಮಾಡುವ ಅಧಿಕಾರಿಗಳ ವಿವರ ನೀಡಲು ಬಿಬಿಎಂಪಿಗೆ ಸೂಚಿಸಿದ್ದಾರೆ. ಜುಲೈ ಒಂದರಿಂದ ಹೊಸ ಘನತ್ಯಾಜ್ಯ ಕಂಪನಿ ಕಾರ್ಯ ನಿರ್ವಹಿಸಲಿದೆ.
ಹೇಗಿರಲಿದೆ ಕಂಪನಿಯ ಆಡಳಿತ..?
ನಗರಾಭಿವೃದ್ಧಿ ಇಲಾಖೆಯ (ಎಸಿಎಸ್) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಈ ಕಂಪನಿ ರಚನೆಯಾಗಿದ್ದು, ಬಿಬಿಎಂಪಿ ಮುಖ್ಯ ಆಯುಕ್ತರು ಇದರ ಸಹ ನಿರ್ದೇಶಕರಾಗಿರುತ್ತಾರೆ. ಕಂಪನಿ ತನ್ನದೇ ಆದ ಸಿಇಒ ಆಯ್ಕೆ ಮಾಡುತ್ತದೆ. ಬೋರ್ಡ್ ಆಫ್ ಡೈರೆಕ್ಟರ್ಸ್ನಲ್ಲಿ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತರು ಹಾಗೂ ಜಂಟಿ ಆಯುಕ್ತರು ಮತ್ತು ಸದಸ್ಯರಿರುತ್ತಾರೆ. ಆದರೆ, ಇಡೀ ಕಂಪನಿಯು, ನಿರ್ದೇಶಕರು ಹಾಗೂ ಸಿಇಒ ಮೂಲಕ ನಡೆಯಲಿದೆ. ಪಾಲಿಕೆಯಲ್ಲಿ ಸದ್ಯ ಕೆಲಸ ಮಾಡುತ್ತಿರುವ ಇಂಜಿನಿಯರ್‌ಗಳು ಕೂಡ ಸ್ವಲ್ಪ ಸಮಯಕ್ಕೆ, ಪೂರ್ಣಪ್ರಮಾಣದಲ್ಲಿ ಕಂಪನಿ ದೃಢವಾಗಿ ನಿಲ್ಲುವವರೆಗೆ ಅಲ್ಲಿ ಕೆಲಸ ನಿರ್ವಹಿಸಲಿದ್ದಾರೆ.
ಕೆಎಸ್ಪಿಸಿಬಿ ಮಂಡಳಿಯ ಮಾದರಿಯಲ್ಲೇ ಈ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಕಂಪನಿಯ ಆಡಳಿತವರ್ಗ ಕೆಲಸ ಮಾಡಲಿದೆ. ಬೋರ್ಡ್ ಸದಸ್ಯರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅವರನ್ನು ಆಯ್ಕೆ ಮಾಡಲಿದ್ದಾರೆ. ಅದನ್ನು ಹೊರತುಪಡಿಸಿ, ಉಳಿದ ಅಧಿಕಾರಿಗಳು, ಮಾರ್ಷಲ್ಸ್, ಕಿರಿಯ ಆರೋಗ್ಯ ಪರಿವೀಕ್ಷಕರು ಎಲ್ಲರೂ ಬಿಬಿಎಂಪಿಯಿಂದ ಕಂಪನಿಗೆ ವರ್ಗಾವಣೆ ಆಗಲಿದ್ದಾರೆ. ಕೆಲ ಹಿರಿಯ ಅಧಿಕಾರಿಗಳು, ಇಂಜಿನಿಯರ್‌ಗಳು ಪಾಲಿಕೆಯಲ್ಲೇ ಕಾರ್ಯನಿರ್ವಹಿಸಲು ಇಚ್ಚಿಸಿದ್ದಲ್ಲಿ, ಕಾಲಮಿತಿಗೆ ಒಳಪಟ್ಟು ಕಂಪನಿಯಲ್ಲಿ ಹೆಚ್ಚುವರಿಯಾಗಿ ಕೆಲಸ ಮಾಡಲಿದ್ದಾರೆ. ಕಂಪನಿ ತನ್ನದೇ ಆದ ನಿಯಮ, ನೇಮಕಾತಿಗಳನ್ನು ಮಾಡಿದರೆ ಆರು ತಿಂಗಳ ಒಳಗಾಗಿ ಅವರದ್ದೇ ಸಿಬ್ಬಂದಿ ವರ್ಗ ರಚನೆಯಾಗಲಿದೆ.