ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅತ್ಯುತ್ತಮ ಸಾಧನೆ ಮಾಡಿದೆ. ಶೇ.90 ರಷ್ಟು ಫಲಿತಾಂಶ ಪಡೆದು ಮೊದಲ ಬಾರಿಗೆ ಎರಡನೇ ಸ್ಥಾನ ಪಡೆದಿದೆ.
2020ರ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಲವು ದಾಖಲೆಗಳಿಗೆ ಕಾರಣವಾಗಿದೆ. 2018ರ ಪರೀಕ್ಷಾ ಫಲಿತಾಂಶದಲ್ಲಿ ಶೇ 82.17 ರಷ್ಟು ಪಡೆದು 14 ನೇ ಸ್ಥಾನ ಪಡೆದಿದ್ದ ಜಿಲ್ಲೆ, 2019ರ ಫಲಿತಾಂಶದಲ್ಲಿ ಶೇ 88.34 ರಷ್ಟು ಪಡೆದು 3ನೇ ಸ್ಥಾನ ಪಡೆದಿತ್ತು. ಸದ್ಯ 2020ರಲ್ಲಿ ಶೇ 90.00 ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿದೆ. ಕಳೆದ ಬಾರಿಯ ಫಲಿತಾಂಶಕ್ಕಿಂತ ಶೇ 1.66 ಹೆಚ್ಚಳವಾಗಿದ್ದು ಈ ಫಲಿತಾಂಶ ಜಿಲ್ಲೆಯ ಶೈಕ್ಷಣಿಕ ಪ್ರಗತಿಯನ್ನು ತೋರಿಸುತ್ತಿದೆ.
ಬಾಲಕಿಯರೇ ಮೇಲುಗೈ
ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳು ಸೇರಿದಂತೆ ಒಟ್ಟು 12407 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 11166 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಿರ್ಣರಾಗಿದ್ದು ಶೇ90.00 ಫಲಿತಾಂಶ ಬಂದಿದೆ. ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ಧು 6108 ಬಾಲಕಿಯರಲ್ಲಿ 5638 ಬಾಲಕಿಯರು ಉತ್ತೀರ್ಣರಾಗಿದ್ದು, ಶೇ 92.31 ರಷ್ಟು ಫಲಿತಾಂಶ ಬಂದಿದೆ.
ಇನ್ನೂ ಬಾಲಕರಲ್ಲಿ 6299 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5528 ಬಾಲಕರು ಉತ್ತಿರ್ಣರಾಗಿ ಶೇ 87.76 ರಷ್ಟು ಫಲಿತಾಂಶ ಪಡೆದಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶೇ 87.11, ಅನುದಾನಿತ ಶಾಲೆಗಳಲ್ಲಿ ಶೇ 83.93, ಅನುದಾನರಹಿತ ಶಾಲೆಗಳು ಶೇ 94.52 ರಷ್ಟು ಫಲಿತಾಂಶ ಬಂದಿದೆ.
ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಶೇ 87.69 , ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಶೇ 89.51 ಮತ್ತು ಇತರೆ ವಿದ್ಯಾರ್ಥಿಗಳು ಶೇ 90.82 ರಷ್ಟು ಪಡೆದಿದ್ದಾರೆ.