ಬೆಂಗಳೂರು: ಕೊರೊನಾ ತಡೆಗಟ್ಟುವಲ್ಲಿ ಬೆಂಗಳೂರು ಬೇರೆ ನಗರಗಳಿಗೆ ಮಾದರಿಯಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪನವರ ನಾಯಕತ್ವ ಹಾಗೂ ಪ್ರಧಾನಿಯವರ ಸಂಪೂರ್ಣ ಸಹಕಾರದಿಂದ ಇಂದು ಬೆಂಗಳೂರು ಕೊರೊನಾ ವೈರಸ್ ಹೋಗಲಾಡಿಸುವುದರಲ್ಲಿ ಬೇರೆ ನಗರಗಳಿಗೆ ಮಾದರಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು ಜಿಲ್ಲೆ ಈಗ ದೇಶದ ರೋಲ್ ಮಾಡೆಲ್ ಸಿಟಿ. ಕೋವಿಡ್ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ ನಾಲ್ಕು ನಗರಗಳ ಪೈಕಿ ಬೆಂಗಳೂರು ಕೂಡಾ ಒಂದು. ಚೆನ್ನೈ, ಬೆಂಗಳೂರು, ಇಂದೋರ್, ಜೈಪುರ ಸಿಟಿಗಳು ಮಾದರಿ ನಗರಗಳಾಗಿವೆ. ಇಷ್ಟಕ್ಕೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಪರಿಣಾಮಕಾರಿ ಅಸ್ತ್ರವಾಗಿದ್ದು ಯಾವುದು? ಹೊಸ ಹೊಸ ಅನ್ವೇಷಣೆ ಮಾಡಿದ್ದು ಯಾವುದು ಅನ್ನೋದನ್ನ ನೋಡಿದರೆ.. 1)ಮನೆ ಮನೆ ಸರ್ವೇ ಕಾರ್ಯ 2) ಕಂಟೇನ್ಮೆಂಟ್ ಝೋನ್ಗಳಲ್ಲಿ ರ‍್ಯಾಂಡಮ್ ಟೆಸ್ಟ್ 3)ಫೀವರ್ ಕ್ಲಿನಿಕ್ ಸ್ಥಾಪನೆ 4) ಕಡಿಮೆ ಅವಧಿಯಲ್ಲಿ ಹೆಚ್ಚು ಲ್ಯಾಬ್ಗಳ ಸ್ಥಾಪನೆ 5)ಗಂಟಲು ದ್ರವ ಕಲೆಕ್ಟಿಂಗ್ ಬೂತ್ ಸ್ಥಾಪನೆ 6) ರಾಸಾಯನಿಕ ಸಿಂಪಡಣೆಯ ಟನಲ್ ನಿರ್ಮಿಸಿದ್ದು 7) ಹಳೇ ಬಸ್ಗಳನ್ನು ಮೊಬೈಲ್ ಫೀವರ್ ಕ್ಲಿನಿಕ್ ಆಗಿ ಮಾರ್ಪಾಡು 8) ಕೊರೊನಾ ವಾರಿಯರ್ಸ್ ಗ್ಲಾಸ್ ಹೆಲ್ಮೆಟ್ ವಿತರಣೆ... ಅಷ್ಟೇ ಅಲ್ಲ ನೋವೆಲ್ ಕೊರೊನಾ ವೈರಸ್ ಕರುನಾಡಿಗೆ ಕಾಲಿಡುವ ಮುನ್ನವೇ ಸಾರ್ವಜನಿಕ ಸ್ಥಳಗಳನ್ನು ಇಡೀ ಭಾರತದಲ್ಲಿ ಬಂದ್ ಮಾಡಿದ ಮೊದಲ ರಾಜ್ಯ ಅಂದರೆ ಅದು ಕರ್ನಾಟಕ.
ರಾಜ್ಯದಲ್ಲಿ ಕೊರೊನಾ ವಿರುದ್ಧ ಯುದ್ಧ ಶುರುವಾಗುವ ಮೊದಲೇ ವೈರಸ್ ಕಾರ್ಯಾಚರಣೆಗೆ 200 ಕೋಟಿ ಮೀಸಲು ಇಟ್ಟಿದ್ದು ನಮ್ಮದೇ ರಾಜ್ಯ. ಕೊರೊನಾ ಪೀಡಿತರಿಗೆ ಪ್ರತ್ಯೇಕ ಆಸ್ಪತ್ರೆ ಮೊದಲು ನಿರ್ಮಿಸಿದ್ದು, ಜನಸಾಮಾನ್ಯರ ಸಹಾಯಕ್ಕೆ ಸಹಾಯವಾಣಿ, ಮೊಬೈಲ್ ಆ್ಯಪ್ ತಯಾರಿಸಿದ ರಾಜ್ಯ ಅಂದರೆ ಅದು ಕರ್ನಾಟಕ. ಹೀಗೆ ಎಲ್ಲಾ ಬಗೆಯ ಪ್ರಯೋಗಗಳ ಸಿಟಿಯಾಗಿದ್ದು ನಮ್ಮ ಬೆಂಗಳೂರು ಇದೀಗ ದೇಶಕ್ಕೆ ರೋಲ್ ಮಾಡೆಲ್ ಆಗಿರೋದು ಸಂತಸದ ವಿಷಯ.