ಬೆಂಗಳೂರು: ದೇಶದ ನಗರಗಳ ಪೈಕಿ ಬೆಂಗಳೂರು ನಗರದಲ್ಲೇ ಅತಿಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಬೆಂಗಳೂರು ಈಗ ಕೊರೊನಾ ರಾಜಧಾನಿಯಾಗಿ ಮಾರ್ಪಟ್ಟಿದೆ. ನಗರದಲ್ಲಿ 1.24 ಲಕ್ಷ ಸೋಂಕಿತರಿದ್ದು, ಆಸ್ಪತ್ರೆ, ಮನೆ ಹಾಗೂ ಸಿಸಿ ಕೇಂದ್ರಗಳಲ್ಲಿ ಆರೈಕೆಯಲ್ಲಿದ್ದಾರೆ.
ಬೆಂಗಳೂರಿಗೆ ಕಪ್ಪು ಚುಕ್ಕೆ!
ಮಂಗಳವಾರದ ಅಂತ್ಯದವರೆಗೂ 1.25 ಲಕ್ಷ ಸಕ್ರಿಯ ಪ್ರಕರಣಗಳು ಇರುವ ಮೂಲಕ ಪುಣೆ ಮೊದಲ ಸ್ಥಾನದಲ್ಲಿತ್ತು. ಆದರೆ, ಬುಧವಾರ ಪುಣೆಯಲ್ಲಿ 10,852 ಮಂದಿಗೆ, ಬೆಂಗಳೂರಿನಲ್ಲಿ 13,640 ಮಂದಿಗೆ ಸೋಂಕು ಹಬ್ಬುವ ಮೂಲಕ ಬೆಂಗಳೂರು ಮೊದಲ ಸ್ಥಾನಕ್ಕೆ ಏರಿದೆ.
ಪುಣೆಯಲ್ಲಿ ಅತಿಹೆಚ್ಚು ಜನ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ಬೆಂಗಳೂರು ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,24,894ಕ್ಕೆ ಏರಿಕೆಯಾಗಿದೆ.
1.21 ಲಕ್ಷದೊಂದಿಗೆ ಪುಣೆ ಎರಡನೇ ಸ್ಥಾನದಲ್ಲಿದೆ. ಬುಧವಾರ ದೆಹಲಿ ಹೊರತುಪಡಿಸಿದರೆ ಬೆಂಗಳೂರಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ಕಂಡು ಬಂದಿವೆ. ಆದರೆ ದೆಹಲಿಯಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಉತ್ತಮವಾಗಿದ್ದು, ಒಂದು ಲಕ್ಷಕ್ಕೂ ಕಡಿಮೆ ಸಕ್ರಿಯ ಪ್ರಕರಣಗಳಿವೆ. ಸದ್ಯ ಬೆಂಗಳೂರಿನ ಸೋಂಕಿನ ಏರಿಕೆ ಅಂದಾಜಿಸಿದರೆ, ಒಂದೇ ವಾರದಲ್ಲಿ ದೆಹಲಿಯನ್ನೂ ಹಿಂದಿಕ್ಕುವ ಸಾಧ್ಯತೆ ಇದೆ.