ಬೆಂಗಳೂರು:ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಪರಿಸರ ಸ್ನೇಹಿ ಉಪಕ್ರಮದ ಭಾಗವಾಗಿ ಘನ ತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಕೈಗೊಂಡಿದೆ. ಬಿಬಿಎಂಪಿಯು ರೈಲ್ವೆಯನ್ನು ಬೃಹತ್ ಉತ್ಪಾದಕ ಎಂದು ವರ್ಗೀಕರಿಸಿದ್ದು, ತ್ಯಾಜ್ಯ ವಿಲೇವಾರಿ ಮಾಡಲು ಬೃಹತ್ ಉತ್ಪಾದಕಗಳಿಗೆ ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ. ವಿಭಾಗವು ಎರಡು ರೀತಿಯ ತ್ಯಾಜ್ಯವನ್ನು ನಿರ್ವಹಿಸುತ್ತಿದ್ದು, ಅದರಲ್ಲಿ ರೈಲ್ವೆ ಕಾಲೋನಿಗಳ ಮನೆಗಳು, ರಸ್ತೆ ಗುಡಿಸುವುದರಿಂದ ಉತ್ಪತ್ತಿಯಾಗುವ ಸ್ಥಳೀಯ ಘನತ್ಯಾಜ್ಯ ಮತ್ತು ರೈಲ್ವೆ ಆಸ್ಪತ್ರೆಗಳು ಹಾಗೂ ಆರೋಗ್ಯ ಘಟಕಗಳಲ್ಲಿ ಉತ್ಪತ್ತಿಯಾಗುವ ಜೈವಿಕ ವೈದ್ಯಕೀಯ ತ್ಯಾಜ್ಯ ಆಗಿದೆ.
ಈ ವಿಭಾಗವು ಪುರಸಭೆಯ ತ್ಯಾಜ್ಯ ವಿಲೇವಾರಿಗಾಗಿ ಮುನ್ಸಿಪಲ್ ಘನತ್ಯಾಜ್ಯ ನಿರ್ವಹಣೆಯ ಒಪ್ಪಂದವನ್ನು ಹೊಂದಿದೆ. ಬೆಂಗಳೂರು ವಿಭಾಗದ ರೈಲ್ವೇ ವ್ಯಾಪ್ತಿಯಲ್ಲಿ ಬೆಂಗಳೂರು ನಗರದಲ್ಲಿ 826, ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ 460 ಮತ್ತು ಯಶವಂತಪುರದಲ್ಲಿ 300 ವಸತಿ ಗೃಹಗಳಿವೆ. ಮನೆಮನೆಗೆ ತೆರಳಿ ಈ ವಸತಿ ಗೃಹಗಳಿಂದ ಸಂಗ್ರಹಿಸಿದ ಕಸವನ್ನು ಮೂರು ವಿಭಿನ್ನ ತೊಟ್ಟಿಗಳಲ್ಲಿ ಯಾಂತ್ರೀಕೃತ ವಾಹಕಗಳಲ್ಲಿ ಇರಿಸಲಾಗುತ್ತದೆ ಮತ್ತು ಕಸ ಸಂಸ್ಕರಣಾ ಕೇಂದ್ರಕ್ಕೆ ಸಾಗಿಸಲಾಗುತ್ತದೆ.
ವರ್ಮಿ ಕಾಂಪೋಸ್ಟ್ ಕೇಂದ್ರಕ್ಕೆ ತ್ಯಾಜ್ಯ:ಒಣ ತ್ಯಾಜ್ಯವನ್ನು ಜೈವಿಕ ವಿಘಟನೀಯ ಮತ್ತು ಜೈವಿಕ ವಿಘಟನೀಯವಲ್ಲದ ತ್ಯಾಜ್ಯ ಎಂದು ವಿಂಗಡಿಸಲಾಗುತ್ತದೆ. ತೇವ ತ್ಯಾಜ್ಯ ಮತ್ತು ಜೈವಿಕ ವಿಘಟನೀಯ ತ್ಯಾಜ್ಯವನ್ನು ಮತ್ತಷ್ಟು ಸಂಸ್ಕರಿಸಿ ಕಾಲೋನಿಗಳಲ್ಲಿರುವ ವರ್ಮಿ ಕಾಂಪೋಸ್ಟ್ ಕೇಂದ್ರಕ್ಕೆ ಕಳುಹಿಸಲಾಗುವುದು. ಜೈವಿಕ ವಿಘಟನೀಯವಲ್ಲದ ತ್ಯಾಜ್ಯವನ್ನು ಅಧಿಕೃತ ಬಿಬಿಎಂಪಿ ಎಂಪನೆಲ್ಡ್ ಒಣ ತ್ಯಾಜ್ಯ ಸಂಗ್ರಾಹಕರಿಗೆ ಹಸ್ತಾಂತರಿಸಲಾಗುತ್ತದೆ.