ಬೆಂಗಳೂರು: ಲಾಕ್ಡೌನ್ ವೇಳೆ ಟ್ರಾವೆಲ್ಸ್ ಹೆಸರಿನಲ್ಲಿ ಚಾಲಕರಿಂದ ಕಾರುಗಳನ್ನು ಅಟ್ಯಾಚ್ (ಕ್ಯಾಬ್ ಅಟ್ಯಾಚ್) ಮಾಡಿಸಿಕೊಂಡು ಹಂತ-ಹಂತವಾಗಿ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದಡಿ ಟ್ರಾವೆಲ್ಸ್ ಮಾಲೀಕ ಸೇರಿದಂತೆ ಮೂವರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಗುಂಟೆಯಲ್ಲಿ ಆರ್.ಎಸ್. ಟ್ರಾವೆಲ್ಸ್ ಮಾಲೀಕ ಶಿವಕುಮಾರ್, ಸಹಚರರಾದ ಕೃಷ್ಣೆಗೌಡ ಹಾಗೂ ಶ್ರೀಕಾಂತ್ ಎಂಬುವರನ್ನು ಬಂಧಿಸಿ 75 ಕಾರುಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಲತಃ ದಾವಣಗೆರೆಯ ಶಿವಕುಮಾರ್ ಎರಡು ವರ್ಷಗಳ ಹಿಂದೆ ಕೋಳಿ ಫಾರಂ ಹಾಗೂ ಮೆಕ್ಕೆಜೋಳ ವ್ಯಾಪಾರಿಯಾಗಿದ್ದ. ಬಿಸಿನೆಸ್ನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ. ಸಾಲಗಾರರ ಕಾಟದಿಂದ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಆರ್.ಎಸ್. ಟ್ರಾವೆಲ್ಸ್ ತೆರೆದಿದ್ದ. ಲಾಕ್ಡೌನ್ ವೇಳೆ ಗ್ರಾಹಕರಿಗೆ ಕಾರುಗಳನ್ನು ತಮ್ಮ ಟ್ರಾವೆಲ್ಸ್ಗೆ ಅಟ್ಯಾಚ್ ಮಾಡಿಸಿಕೊಂಡರೆ ಹಣ ನೀಡುವುದಾಗಿ ಭರವಸೆ ನೀಡಿದ್ದ. ಶಿವಕುಮಾರ್ ಮಾತನ್ನು ನಂಬಿ ಗ್ರಾಹಕರು ತಮ್ಮ ಕಾರುಗಳನ್ನು ಬಾಡಿಗೆಗೆ ಬಿಟ್ಟಿದ್ದರು.
ಇದನ್ನೂ ಓದಿ:Weekend Curfew: ಬೆಂಗಳೂರು ಏರ್ಪೋರ್ಟ್ಗೆ ತೆರಳಲು ವಾಯುವಜ್ರ ಬಸ್.. ರಾಜ್ಯದಲ್ಲಿ ಹೀಗಿರಲಿದೆ ಸಂಚಾರ ವ್ಯವಸ್ಥೆ
ಗ್ರಾಹಕರ ಕಾರುಗಳನ್ನು ತಮ್ಮ ಕಂಪನಿಗೆ ಅಟ್ಯಾಚ್ ಮಾಡಿಸಿಕೊಂಡು ಬಳಿಕ ಕಾರುಗಳನ್ನು ಕೇರಳ, ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಲ್ಲಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದ. ಆರಂಭದಲ್ಲಿ ಇದೇ ಹಣವನ್ನು ಗ್ರಾಹಕರಿಗೆ ಬಾಡಿಗೆ ರೂಪದಲ್ಲಿ ನೀಡುತ್ತಿದ್ದ ಎನ್ನಲಾಗ್ತಿದೆ. ಈತನ ವಂಚನೆ ಬಯಲಿಗೆ ಬರುತ್ತಿದ್ದಂತೆ ಹತ್ತಾರು ಜನರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಈ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ಚಿಯಾಗಿದ್ದಾರೆ.