ಬೆಂಗಳೂರು:ನಗರ ಪೊಲೀಸರು ಸಿಸಿಬಿ ಸಹಾಯದಿಂದ ತಂಡ ರಚನೆ ಮಾಡಿ, ನಕಲಿ ಸಿಮ್ ಕಾರ್ಡ್ ಮಾರಾಟ ಮಾಡುವವರ ಮೇಲೆ ನಿಗಾ ಇಡಲು ನಿರ್ಧರಿಸಿದ್ದಾರೆ.
ನಕಲಿ ಸಿಮ್ ಕಾರ್ಡ್ ಮಾರುವವರ ಮೇಲೆ ಬೆಂಗಳೂರು ಪೊಲೀಸರ ಕಣ್ಣು - ನಕಲಿ ಸಿಮ್
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮೊಬೈಲ್ ಬಳಕೆ ಮಾಡುವ ಕಾರಣ ಪ್ರತಿಯೊಬ್ಬರೂ ಸಿಮ್ ಖರೀದಿ ಮಾಡಿಯೇ ಮಾಡ್ತಾರೆ. ಕೆಲವರು ನೆಟ್ವರ್ಕ್ ಆಧಾರದ ಮೇಲೆ ತಮಗೆ ಅನುಕೂಲಕರವಾಗುವ ರೀತಿ ಬೇಕಾದ ಸಿಮ್ ಖರೀದಿಸುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿ ಮಾಡಿ, ಅದನ್ನ ಬೇರೆ ಬೇರೆ ಅಪರಾಧ ಕೃತ್ಯಗಳಿಗೆ ಬಳಕೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ.

ಬೇರೆ ವ್ಯಕ್ತಿಗಳ ಆಧಾರ್ ಸಂಖ್ಯೆ ಬಳಸಿ ಸಿಮ್ ಖರೀದಿ ಮಾಡಿ, ಆ ಸಿಮ್ ಕಾರ್ಡ್ಅನ್ನು ಹಲವಾರು ಅಪರಾಧ ಕೃತ್ಯವೆಸಗಲು ಬಳಕೆ ಮಾಡುತ್ತಿರುವ ವಿಚಾರ ಬೆಂಗಳೂರು ಪೊಲೀಸರಿಗೆ ತಿಳಿದು ಬಂದಿದೆ. ಹೀಗಾಗಿ ನಗರ ಪೊಲೀಸರು ಸಿಸಿಬಿ ಸಹಾಯದಿಂದ ತಂಡ ರಚನೆ ಮಾಡಿದ್ದು, ರಸ್ತೆಗಳಲ್ಲಿ ನಕಲಿ ಸಿಮ್ ವ್ಯಾಪಾರ ಮಾಡುವರ ಮೇಲೆ ನಿಗಾ ಇಡಲು ನಿರ್ಧಾರ ಮಾಡಿದ್ದಾರೆ.
ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಡಾಕ್ಯುಮೆಂಟ್ ಕೊಟ್ಟು ಕೆಲವರು ಸಿಮ್ ಖರೀದಿ ಮಾಡ್ತಾರೆ. ಆದ್ರೆ ಇದನ್ನು ಕೆಲವರು ದುರ್ಬಳಕೆ ಮಾಡಿಕೊಂಡು ಫೇಕ್ ಸಿಮ್ ಮಾರಾಟ ಮಾಡಿ, ಅಪರಾಧ ಪ್ರಕರಣದಲ್ಲಿ ಭಾಗಿಯಾಗುವಂತೆ ಮಾಡ್ತಾರೆ. ಹೀಗಾಗಿ ಸಿಮ್ ಮಾರಾಟ ಮಾಡುವ ಆರೋಪಿಗಳಿಗೆ ಟೆಲಿಗ್ರಾಂ ಆ್ಯಕ್ಟ್ ಹಾಗೂ ಚೀಟಿಂಗ್ ಕೇಸ್ ಹಾಕಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.