ಬೆಂಗಳೂರು: ಒಂದೆಡೆ ಟ್ರಾಫಿಕ್ ಪೊಲೀಸರ ಟೋಯಿಂಗ್ ವ್ಯವಸ್ಥೆ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ನಿಷ್ಠಾವಂತ ಪೊಲೀಸರು ಮಾನವೀಯತೆ ಮೆರೆಯುವ ಘಟನೆಗಳೂ ನಡೆಯುತ್ತಿವೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಕಾಸಪ್ಪ ಕಲ್ಲೂರು ಅವರ ಸಮಯಪ್ರಜ್ಞೆಯಿಂದ ಒಂದು ಅಮೂಲ್ಯ ಜೀವ ಉಳಿದಿದೆ.
ಗ್ಲೋಬಲ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ರೋಗಿಯನ್ನು ಹೊತ್ತ ಆ್ಯಂಬುಲೆನ್ಸ್ ನಿನ್ನೆ ಮಧ್ಯಾಹ್ನ ಚಾಲುಕ್ಯ ಸರ್ಕಲ್ ಬಳಿ ಇರುವ ಸಿಐಡಿ ಕಚೇರಿ ಬಳಿ ಬರುವಾಗ ಟೈರ್ ಪಂಕ್ಚರ್ ಆಗಿದೆ. ಎಮರ್ಜೆನ್ಸಿ ಎಂಬ ಕಾರಣಕ್ಕೆ ರೋಗಿಯ ಪತ್ನಿ ಮತ್ತು ಮಗಳು ಸತತ 10 ಬಾರಿ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದರು.
ಆದ್ರೆ, ಯಾವುದೇ ವಾಹನಗಳು ಬರಲಿಲ್ಲ. ಒಳಗೆ ರೋಗಿಯ ನರಳಾಟ ಹೆಚ್ಚಾಗಿತ್ತು. ದುಃಖದಲ್ಲಿದ್ದ ಮಹಿಳೆಯರು ಕಣ್ಣೀರಿಡುತ್ತಿದ್ದರು. ಸಹಾಯಕ್ಕೆ ಯಾರೂ ಕೂಡ ಬಂದಿರಲಿಲ್ಲ. ಆ್ಯಂಬುಲೆನ್ಸ್ನಲ್ಲಿ ಆಕ್ಸಿಜನ್ ಲೆವೆಲ್ ಕೂಡ ಕಡಿಮೆಯಾಗುತ್ತಿತ್ತು.