ಬೆಂಗಳೂರು: ನಗರದಲ್ಲಿ ಕೋವಿಡ್ ನಿಯಮಗಳು ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಪ್ರವೃತ್ತವಾಗಿದೆ.
ಈ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ನಿನ್ನೆ ಪೊಲೀಸ್ ಇಲಾಖೆಯೊಂದಿಗೆ ವಿವರವಾದ ಚರ್ಚೆ ನಡೆದಿದೆ. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ಯಾವ ರೀತಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಾಗಿದೆ. ಬಿಬಿಎಂಪಿ ವಲಯಗಳ ಜಂಟಿ ಆಯುಕ್ತರು, ಪೊಲೀಸ್ ಅಧಿಕಾರಿಗಳು ಎಲ್ಲರೂ ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ನಗರದಲ್ಲಿ ಕೋವಿಡ್ ಸಂಖ್ಯೆ ಕಡಿಮೆಯಾಗಿದ್ದರೂ, ಅಕ್ಕ ಪಕ್ಕದ ರಾಜ್ಯಗಳಲ್ಲಿ ಕೋವಿಡ್ ಹೆಚ್ಚಾಗಿರುವುದರಿಂದ ನಗರದಲ್ಲಿಯೂ ನೈಟ್ ಕರ್ಫ್ಯೂ ಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿದೆ. ಈಗಾಗಲೇ ಇರುವ ನಿಬಂಧನೆಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ತೀರ್ಮಾನಿಸಲಾಗಿದೆ. ಆ ದಿಕ್ಕಿನಲ್ಲಿ ಅಧಿಕಾರಿಗಳು ಹಾಗೂ ಪೊಲೀಸರು ಕ್ರಿಯಾಶೀಲರಾಗಿದ್ದು, ಇಂದಿನಿಂದ ಕಾರ್ಯಪ್ರವೃತ್ತರಾಗಲಿದ್ದಾರೆ ಎಂದು ತಿಳಿಸಿದರು.
ವೀಕೆಂಡ್ ಕರ್ಫ್ಯೂ ಪ್ರಸ್ತಾವನೆ ಇಲ್ಲ:ಬಿಬಿಎಂಪಿ ನಿರಂತರವಾಗಿ ತಜ್ಞರ ಸಮಿತಿಯ ಜೊತೆಗೆ ಸಂಪರ್ಕದಲ್ಲಿದೆ. ವೀಕೆಂಡ್ ಕರ್ಫ್ಯೂ ಜಾರಿ ಬಗ್ಗೆ ಯಾವುದೇ ಪ್ರಸ್ತಾವನೆ ಪಾಲಿಕೆ ನೀಡಿಲ್ಲ. ನಾಳೆ ತಾಂತ್ರಿಕ ಸಮಿತಿಯ ಜೊತೆ ಸಭೆ ನಡೆಯಲಿದೆ. ನಿತ್ಯ 450 ಪ್ರಕರಣ ಬರುತ್ತಿದ್ದು, ಸರ್ಕಾರಿ ಕೋಟಾದಲ್ಲಿ 20-25 ಮಾತ್ರ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ, ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಚಿಂತಿಸಲಾಗುವುದು ಎಂದರು.