ಬೆಂಗಳೂರು: ಜೆ.ಪಿ.ನಗರದ ಆಲಹಳ್ಳಿಯಲ್ಲಿ 4 ಎಕರೆ 20 ಗುಂಟೆ ಸ್ವತ್ತು ಸ್ವಾಧೀನಪಡಿಸಿಕೊಳ್ಳುವ ಮೂಲಕ ಭೂಕಬಳಿಕೆದಾರರ ವಿರುದ್ಧ ಬಿಡಿಎ (Bangalore Development Authority) ಕಾರ್ಯಾಚರಣೆ ಮುಂದುವರಿಸಿದೆ.
ಸರ್ವೆ ಸಂಖ್ಯೆ 5/7, 6/1, 6/4, 6/5, 7/2, 3, 4 ಮತ್ತು 8 ರ 4 ಎಕರೆ 20 ಗುಂಟೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ 40 ಶೆಡ್‌ಗಳನ್ನು ಬಿಡಿಎ ದಕ್ಷಿಣ ವಲಯದ ಕಾರ್ಯಪಾಲಕ ಅಭಿಯಂತರ ಎಚ್.ಎಸ್.ಚುಂಚೇಗೌಡ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ಜೆ.ಪಿ.ನಗರ ಬಡಾವಣೆಯ 9ನೇ ಹಂತದ ನಿರ್ಮಾಣಕ್ಕೆಂದು 1988 ರಲ್ಲಿ ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಪ್ರಾಥಮಿಕ ಅಧಿಸೂಚನೆಯನ್ನು ಬಿಡಿಎ ಹೊರಡಿಸಿತ್ತು. ಇದಾದ ಬಳಿಕ 1997 ರಲ್ಲಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿ ಜಾಗವನ್ನು ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ಆದರೆ, ಕೆಲವರು ತಾತ್ಕಾಲಿಕವಾಗಿ 40 ಶೆಡ್‌ಗಳನ್ನು ನಿರ್ಮಾಣ ಮಾಡಿ ಜಾಗ ತಮ್ಮದೆಂದು ಪ್ರತಿಪಾದಿಸಿದ್ದರು. ಆದರೆ, ಇದರ ವಿರುದ್ಧ ಬಿಡಿಎ (BDA) ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ನ್ಯಾಯಾಲಯ ಬಿಡಿಎ ಪರವಾಗಿ ತೀರ್ಪು ನೀಡಿ ಜಾಗವನ್ನು ವಶಪಡಿಸಿಕೊಳ್ಳುವಂತೆ ಇತ್ತೀಚೆಗೆ ಆದೇಶ ನೀಡಿತ್ತು.
ನ್ಯಾಯಾಲಯದ ಆದೇಶದ ಮೇರೆಗೆ ಕಾರ್ಯಪಾಲಕ ಅಭಿಯಂತರ ಚುಂಚೇಗೌಡ, ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್, ಡಿವೈಎಸ್ ಪಿ.ರವಿಕುಮಾರ್ ಸೇರಿದಂತೆ 75ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಶೆಡ್ ಗಳನ್ನು 5ಕ್ಕೂ ಅಧಿಕ ಜೆಸಿಬಿಗಳನ್ನು ಬಳಸಿ ತೆರವುಗೊಳಿಸಲಾಯಿತು.