ಬೆಂಗಳೂರು: ಬಿಡಿಎ ಮಂಗಳವಾರ ಇಂದಿರಾನಗರದಲ್ಲಿ ಸುಮಾರು 20 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದೆ. ಇಂದಿರಾನಗರ 2 ನೇ ಹಂತದಲ್ಲಿನ ಬಿನ್ನಮಂಗಲದ ಸರ್ವೆ ಸಂಖ್ಯೆ 13 ಬಿಡಿಎಗೆ ಸೇರಿದ್ದ 11 ಗುಂಟೆ ಜಾಗವನ್ನು ಒತ್ತುವರಿದಾರರಿಂದ ಬಿಡಿಸಿ ಕೊಳ್ಳಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.
ಇಂದಿರಾನಗರ 2 ನೇ ಹಂತದಲ್ಲಿನ ಬಿನ್ನಮಂಗಲದಲ್ಲಿ ಖಾಸಗಿಯವರು ಮೂರು ಶೆಡ್ಗಳನ್ನು ಹಾಕಿಕೊಂಡು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. ಈ ಬಗ್ಗೆ ಬಿಡಿಎ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಜಾಗವನ್ನು ತೆರವುಗೊಳಿಸಿರಲಿಲ್ಲ. ಖಾಸಗಿ ಒತ್ತುವರಿದಾರರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರಾದರು. ಆದರೆ, ಸುಪ್ರೀಂಕೋರ್ಟ್ ಬಿಡಿಎ ಪರ ತೀರ್ಪು ನೀಡಿತ್ತು ಹೀಗಾಗಿ ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಡಿಎ ವಿಶೇಷ ಕಾರ್ಯಪಡೆಯ ಪೊಲೀಸ್ ಅಧಿಕಾರಿಗಳಾದ ಭಾಸ್ಕರ್, ರವಿಕುಮಾರ್ ಮತ್ತು ಲಕ್ಷ್ಮಯ್ಯ ಹಾಗೂ ಕಾರ್ಯಪಾಲಕ ಅಭಿಯಂತರ ಮಹದೇವಗೌಡ ನೇತೃತ್ವದ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ತಾತ್ಕಾಲಿಕ ಶೆಡ್ಗಳನ್ನು ತೆರವುಗೊಳಿಸಿ ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ. ಈ 11 ಗುಂಟೆ ಜಾಗದ ಮಾರುಕಟ್ಟೆ ಮೌಲ್ಯ ಸುಮಾರು 18 ಕೋಟಿ ರೂಪಾಯಿಗಳಾಗಿದೆ ಎಂದಿದ್ದಾರೆ.