ಬೆಂಗಳೂರು: ರಾಜ್ಯದ ಆರು ವಲಯಗಳಲ್ಲಿ ಚಿತ್ರಕಲಾ ಗ್ಯಾಲರಿ ಪ್ರಾರಂಭ ಮಾಡುತ್ತೇವೆ. ಚಿತ್ರಕಲೆಗೆ ಡೀಮ್ಡ್ ಯೂನಿವರ್ಸಿಟಿ ಮಾಡಲು ಮುಂದಿನ ಅಧಿವೇಶನದಲ್ಲಿ ವಿಧೇಯಕ ತರಲಾಗುತ್ತದೆ. ಇದರ ಕೆಳಗೆ ಹಲವಾರು ಸಂಸ್ಥೆಗಳನ್ನ ತಂದು ಉತ್ತಮ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಚಿತ್ರಸಂತೆ ಎರಡು ವರ್ಷದ ನಂತರ ಪುನಾರಂಭಗೊಂಡಿದ್ದು, ಕುಮಾರಪಾರ್ಕ್ನಲ್ಲಿ ಸಿಎಂ ಬೊಮ್ಮಾಯಿ ಭಾರತಾಂಬೆಯ ಚಿತ್ರವಿರುವ ಫ್ಲೇಕಾರ್ಡ್ ಮೇಲೆ ಸಹಿ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು, ಶಿವ ಪೂಜೆಯಲ್ಲಿ ಕರಡಿಗೆ ಬಿಟ್ಟಂತೆ ನಾನು ಬಂದಿದ್ದೇನೆ.
ಬಹಳ ಜನ ಮನಸ್ಸಿನಲ್ಲಿ ಬೈದುಕೊಳ್ಳಬಹುದು, ನಾನು ಕಡಿಮೆ ಮಾತನಾಡುತ್ತೇನೆ. ಬಿ.ಎಲ್ ಶಂಕರ್ ಏನೇ ಮಾಡಿದರೂ ಅರ್ಥಪೂರ್ಣವಾಗಿ ಮಾಡುತ್ತಾರೆ. ಚಿತ್ರಸಂತೆ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ವಲಯದಲ್ಲಿ ಬೆಳೆಯುತ್ತಿದೆ. ಬೆಳೆಯುತ್ತಿರುವ ಕಲಾವಿದರಿದ್ದಾರೆ. ಕಲೆ ಮನುಷ್ಯನ ಒಳಗೆ ಇರುವ ಪ್ರತಿಭೆ. ನಮ್ಮ ಕಲೆ ನಮ್ಮ ಹತ್ತಿರ ಇದ್ದರೆ ಅದರ ಬೆಲೆ ಗೊತ್ತಾಗಲ್ಲ, ಕಲೆಗೆ ಬೆಲೆ ಕೊಡುವ ಪ್ರಯೋಗ ಅಂದರೆ ಅದು ಚಿತ್ರಸಂತೆ. ಕಲಾವಿದನಿಗೆ ಹಣ ಮುಖ್ಯವಲ್ಲ, ಕಲೆಯಿಂದ ಬರುವ ಪ್ರತಿಕ್ರಿಯೆ ಬಹಳ ಮುಖ್ಯ ಎಂದರು.
ಕಲೆಯಲ್ಲೂ ತಪ್ಪು ಕಂಡು ಹಿಡಿಯುವ ವರ್ಗ ಇರುತ್ತದೆ, ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಸೃಷ್ಟಿಕರ್ತನಿಗೂ ಸರಿಯಾಗಿ ಬರೆಯಲು ಆಗಲ್ಲ, ಇದಕ್ಕೆ ತಲೆ ಕೆಡೆಸಿಕೊಳ್ಳದೇ ಮುಂದುವರೆಸಿ, ಚಿತ್ರಸಂತೆಯನ್ನ ಎಲ್ಲಾ ಜಿಲ್ಲೆಯಲ್ಲೂ ಒಂದೇ ಸರಿ ಪ್ರಾರಂಭ ಮಾಡಲು ಆಗುವುದಿಲ್ಲ. ಹಾಗಾಗಿ, ಮೊದಲು 6 ಜಿಲ್ಲೆಗಳಲ್ಲಿ ಚಿತ್ರಕಲಾ ಗ್ಯಾಲರಿ ಪ್ರಾರಂಭ ಮಾಡುತ್ತೇವೆ. ಮುಂಬರುವ ಅಧಿವೇಶನದಲ್ಲಿ ಡೀಮ್ಡ್ ಯುನಿವರ್ಸಿಟಿ ವಿಧೇಯಕ ತರುವ ಚಿಂತನೆ ನಡೆಸಲಿದ್ದು, ಚಿತ್ರಕಲಾ ವಿವಿಯನ್ನು ಬರುವ ದಿನಗಳಲ್ಲಿ ಪ್ರಾರಂಭ ಮಾಡುವ ಉದ್ದೇಶವಿದೆ ಎಂದು ಹೇಳಿದರು.