ಬೆಂಗಳೂರು: ಗುರುವಾರ ಸಂಜೆ 'ಬೆಂಗಳೂರು ಹುಡುಗರು' ತಂಡ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿತು.
ಬೆಂಗಳೂರು ಹುಡುಗರು ತಂಡದ 'ಭಿಕ್ಷಾಟನೆ ಮುಕ್ತ ಭಾರತ ಚಳವಳಿ'ಯ ಮುಂದಾಳತ್ವ ವಹಿಸಿರುವ ವಿನೋದ್ ಕರ್ತವ್ಯ ರಾಜ್ಯಪಾಲರ ಭೇಟಿ ಬಗ್ಗೆ ಮಾತನಾಡಿ, ರಾಜ್ಯಪಾಲರು ನಾವು ನಡೆಸುತ್ತಿರುವ ಚಳವಳಿಯನ್ನು ಮೆಚ್ಚಿ ಪ್ರಶಂಸಿದ್ದಾರೆ ಎಂದರು.
ಭಿಕ್ಷೆ ಬೇಡುವುದು ಒಂದು ಕಾನೂನುಬಾಹಿರ ಚಟುವಟಿಕೆ. ಹಾಗಾಗಿ, ಸಾರ್ವಜನಿಕರು ಭಿಕ್ಷೆ/ಹಣ ಕೊಡಬಾರದು. ಕೊಟ್ಟರೆ ಅದು ಕಾನೂನುಬಾಹಿರ ಚಟುವಟಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸರ್ಕಾರ ಮತ್ತು ಆಡಳಿತವರ್ಗವು ಈಗಿರುವ ಕಾನೂನನ್ನು ಸರಿಯಾಗಿ ಪಾಲಿಸಿ ಕೆಲಸ ನಿರ್ವಹಿಸಿ ಇಂತಹ ಸಾಮಾಜಿಕ ಪಿಡುಗನ್ನು ನಿವಾರಿಸುವಲ್ಲಿ ಪ್ರಯತ್ನ ಮಾಡಬೇಕು ಎಂದು ರಾಜ್ಯಪಾಲರಿಗೆ ಮನವಿ ಪತ್ರದ ಮೂಲಕ ವಿವರಿಸಿದ್ದೇವೆ ಎಂದು ವಿನೋದ್ ಕರ್ತವ್ಯ ತಿಳಿಸಿದರು.
ಹಿನ್ನೆಲೆ ಏನು?:
ಭಿಕ್ಷುಕರಿಗೆ ನಗದು ರೂಪದಲ್ಲಿ ಭಿಕ್ಷೆ ಹಾಕುವುದನ್ನು ನಿಲ್ಲಿಸಿ. ಅವರಿಗೆ ಆಹಾರ ಮತ್ತು ನೀರು ನೀಡಿ. ಆದರೆ ಒಂದು ರೂಪಾಯಿಯನ್ನೂ ನೀಡಬೇಡಿ ಎಂದು ಚಳವಳಿ ಆರಂಭವಾಗಿತ್ತು. ಭಿಕ್ಷಾಟನೆಯನ್ನು ವಿರೋಧಿಸುವ ಚಳವಳಿ ಬೆಂಗಳೂರು ಹುಡುಗರು ತಂಡದಿಂದ ಪ್ರತಿ ಭಾನುವಾರ ನೆಡೆಯುತ್ತಿದೆ. ಪ್ರತಿ ಒಂದು ನಗರದಲ್ಲೂ, ಕಾನೂನು ಬಾಹಿರವಾಗಿ ಮೋಸ ಮಾಡುವ ಭಿಕ್ಷುಕರ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಹುಡುಗರು ತಂಡದಿಂದ ಅಭಿಯಾನ ಆರಂಭಗೊಂಡಿತ್ತು.