ಬೆಂಗಳೂರು :ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ (ನಿಮ್ಹಾನ್ಸ್) ಸಂಸ್ಥೆಯ 25ನೇ ಘಟಿಕೋತ್ಸವವನ್ನು ಬೆಂಗಳೂರಿನ ನಿಮ್ಹಾನ್ಸ್‌ನ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಸಲಾಯಿತು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ, ಸಿಎಂ ಬಸವರಾಜ ಬೊಮ್ಮಯಿ ಹಾಗೂ ಸಚಿವ ಡಾ.ಕೆ ಸುಧಾಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಿಮ್ಹಾನ್ಸ್ 25ನೇ ಘಟಿಕೋತ್ಸವ 227 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ :ಘಟಿಕೋತ್ಸವದಲ್ಲಿ ಈ ವರ್ಷ ಒಟ್ಟು 227 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿವಿಧ ಪದವಿ ಮತ್ತು ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ 13 ವಿದ್ಯಾರ್ಥಿಗಳಿಗೆ ಪ್ರಶಂಸನೀಯ ಪುರಸ್ಕಾರ ನೀಡಿ ಗೌರವಿಸಲಾಯಿತು.
6 ತಿಂಗಳಲ್ಲಿ ವಿವಿಧ ಆಸ್ಪತ್ರೆಗೆ 100 ಬೆಡ್ಗಳ ವೆಂಟಿಲೇಟರ್ :ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಿಮ್ಹಾನ್ಸ್, ಕಿದ್ವಾಯಿ, ಜಯದೇವ ಆಸ್ಪತ್ರೆಗೆ ಹೆಚ್ಚು ಆದ್ಯತೆ ಕೊಡಲಾಗುವುದು. ನಾನು ಈ ಆಸ್ಪತ್ರೆಗಳಿಗೆ 100 ವೆಂಟಿಲೇಟರ್ಗಳ ಬೆಡ್ಗಳನ್ನ ಕೊಡುತ್ತೇನೆ. ವೈದ್ಯರನ್ನೊಳಗೊಂಡ ಪ್ರತಿ ಸೌಲಭ್ಯವನ್ನ 6 ತಿಂಗಳ ಒಳಗೆ ನೀಡುತ್ತೇನೆ. ಕುಗ್ರಾಮದಿಂದ ಬರುವ ಪ್ರತಿಯೊಬ್ಬರು ಕೂಡ ಚಿಕಿತ್ಸೆ ಸಿಗದೆ ವಂಚಿತರಾಗಬಾರದು ಎಂದರು.
ಈ ಹಿಂದೆ ಒಮ್ಮೆ ವೆಂಟಿಲೇಟರ್ ಡಿಮ್ಯಾಂಡ್ ಬಗ್ಗೆ ನಾನು ನಿರ್ದೇಶಕರಿಂದ ಕೇಳಿದ್ದೆ. ಒಬ್ಬರಿಗೆ ಹಾಕಿದ ವೆಂಟಿಲೇಶನ್ ಕಿತ್ತು ಇನ್ನೊಬ್ಬರಿಗೆ ನೀಡಲು ಆಗಲ್ಲ ಎಂದು ನಿರ್ದೇಶಕರು ನನಗೆ ಮನವರಿಕೆ ಮಾಡಿದ್ದರು. ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ನಾನು ಅದನ್ನ ಅರಿತೆ. ಹೀಗಾಗಿ, ನಾನು 100 ವೆಂಟಿಲೇಟರ್‌ಗಳನ್ನ ಈ ಆಸ್ಪತ್ರೆಗಳಿಗೆ ನೀಡುತ್ತೇನೆ. ಇದುವೇ ನರೇಂದ್ರ ಮೋದಿಯವರ ನವ ಭಾರತ ನಿರ್ಮಾಣ ಕನಸು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಆದ್ಯತೆ :ಸಚಿವ ಡಾ.ಕೆ ಸುಧಾಕರ್ ಮಾತನಾಡಿ, ನಿಮ್ಹಾನ್ಸ್‌ನಂತಹ ಸಂಸ್ಥೆಯಲ್ಲಿ ನೀವು ಕಾನ್ವೋಕೇಶನ್ ಪಡೆಯುತ್ತಿರುವುದು ನಿಮ್ಮ ಗೌರವವನ್ನು ಹೆಚ್ಚಿಸಿದೆ. ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಹೋಗುತ್ತಿರುವ ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ.
ಪ್ರಧಾನಿ ನರೇಂದ್ರ ಮೋದಿಯವರು ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಜನಸಂಖ್ಯೆಗಿಂತ ವೈದ್ಯರು ಕಡಿಮೆ ಇದ್ದಾರೆ ಎಂಬುದನ್ನ ಅರಿತು ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಕೋವಿಡ್ನಂತಹ ಸ್ಥಿತಿಯಲ್ಲಿ ನಿಮ್ಮ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳು ಕೂಡ ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದರು. ರೋಗವನ್ನ ಎದುರಿಸಲು ನಿಮ್ಮ ಪಾತ್ರ ಬಹಳ ದೊಡ್ಡದು ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಧನಾತ್ಮಕ ಚಿಂತನೆ ಗುರಿಯನ್ನ ಮುಟ್ಟಿಸುತ್ತದೆ :ಕೋವಿಡ್ಗೂ ಮೊದಲು ನಮ್ಮಲ್ಲಿ ಲ್ಯಾಬ್ ಇರಲಿಲ್ಲ. ನಿಮ್ಹಾನ್ಸ್‌ನಲ್ಲಿ ಇದ್ದರೂ ಪುಣೆಗೆ ಕಳುಹಿಸುತ್ತಿದ್ದೆವು. ಈಗ ನಮ್ಮಲ್ಲಿ ಲ್ಯಾಬ್ಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ಜೊತೆಗೆ ಪಿಪಿಇ ಕಿಟ್ಗಳನ್ನ ನಮ್ಮಲ್ಲೇ ತಯಾರಿಸುತ್ತಿದ್ದೇವೆ. ಮೆಡಿಕಲ್ಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನ ಹೆಚ್ಚಿಸಿದ್ದೇವೆ. ನಿಮ್ಮ ವ್ಯಕ್ತಿತ್ವದಲ್ಲಿ ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳಿ. ಧನಾತ್ಮಕ ಚಿಂತನೆಗಳು ನಿಮ್ಮ ಗುರಿಯನ್ನ ಮುಟ್ಟಿಸುತ್ತವೆ ಎಂದು ಭಾವಿ ವೈದ್ಯರಿಗೆ ಸಚಿವ ಸುಧಾಕರ್ ಸಲಹೆ ನೀಡಿದರು.
'ದ ಗಾಮಾ ನೈಫ್ ಐಕಾನ್' ಲೋಕಾರ್ಪಣೆ :ವಿಶ್ವದ ಅತ್ಯಾಧುನಿಕ ಮತ್ತು ನಿಖರ ಕ್ರೇನಿಯಲ್ ರೇಡಿಯೋ ಸರ್ಜರಿ ವ್ಯವಸ್ಥೆ ಎನಿಸಿರುವ 'ದ ಗಾಮಾ ನೈಫ್ ಐಕಾನ್' ಅನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಭಾರತದಲ್ಲಿ ಮೊದಲ ಬಾರಿಗೆ ನಿಮ್ಹಾನ್ಸ್ ಮೂಲಕ ಲೆಕ್‌ಸೆಲ್ ಗಾಮಾ ನೈಫ್ (ಎಲ್‌ಜಿಕೆ) ವ್ಯವಸ್ಥೆಗೆ ಚಾಲನೆ ದೊರೆಯುತ್ತಿದೆ. ಈ ಮೂಲಕ ರೇಡಿಯೋ ಸರ್ಜರಿಯಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದಂತಾಗಿದೆ.
ಗಾಮಾ ನೈಫ್‌ನ ಈ ಹಿಂದಿನ ತಲೆಮಾರಿನ ನಿಖರತೆಯನ್ನು ಆಧರಿಸಿ ಮತ್ತು ಹೊಸ ತಂತ್ರಜ್ಞಾನವನ್ನು ಸೇರ್ಪಡೆಗೊಳಿಸಿ ನಿರ್ಮಿಸಲಾಗಿರುವ ಎಲ್‌ಜಿಕೆ ಐಕಾನ್, ವೈದ್ಯರಿಗೆ ಏಕ ಅಥವಾ ಫ್ರಾಕ್ಷನಲ್ ಪ್ರೇಮ್ ಬೇಸ್ಟ್ ಅಥವಾ ಪ್ರೇಮ್‌ಲೆಸ್ ಚಿಕಿತ್ಸೆ ನೀಡುವ ಅವಕಾಶ ನೀಡುತ್ತದೆ.
ಈ ಮೂಲಕ ಹೆಚ್ಚು ವೈಯಕ್ತಿಕರಿಸಿದ ಚಿಕಿತ್ಸೆಯು ಸಾಧ್ಯವಾಗಿದೆ. ಅಲ್ಲದೆ ಮುಂದಿನ ತಲೆಮಾರಿನ ಟ್ರೇಟೆಂಟ್ ಆಪ್ಟಿಮೈಸರ್ ಎನಿಸಿರುವ ಲೆಶೆಲ್ ಗಾಮಾ ನೈಫ್ ಲೈಟಿಂಗ್ ಸಹ ಇದು ಒಳಗೊಂಡಿದೆ. ಒಂದು ಅಥವಾ ಹೆಚ್ಚಿನ ಗುರಿಗಳಿಗಾಗಿ ಶೀಘ್ರವಾಗಿ ಮತ್ತು ಸ್ವಯಂಚಾಲಿತವಾಗಿ ಯೋಜನೆಗಳನ್ನು ರೂಪಿಸಲು ಇದು ನೆರವು ನೀಡುತ್ತದೆ.
ಬೀಮ್-ಆನ್ ಟೈಂ ನಿಯಂತ್ರಣದ ಸಾಧ್ಯತೆಯೊಂದಿಗೆ ವಿವಿಧ ಗುರಿಗಳು ಮತ್ತು ಅಪಾಯದಲ್ಲಿರುವ ಅಂಗಗಳಿಗಾಗಿ (ಒಎಆರ್) ಡೋಸ್ ನಿರ್ಬಂಧಗಳನ್ನು ಆಧರಿಸಿದ ಅಪ್ಟಿಮೈಸೇಶನ್, ಚಿಕಿತ್ಸೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಹಾಗೂ ಚಿಕಿತ್ಸೆಯ ಒಟ್ಟಾರೆ ಗುಣಮಟ್ಟವನ್ನು ವೃದ್ಧಿಸುತ್ತದೆ.
ಶುಕ್ರೂಷಕರ ವಸತಿ ಗೃಹ ಉದ್ಘಾಟನೆ :ಸಾಂಪ್ರದಾಯಿಕ ಆರೋಗ್ಯಸೇವಾ ವಿಧಾನವನ್ನು ಸಾಕ್ಷ್ಯಾಧಾರ ಆಧರಿತ ಆಧುನಿಕ ಜೀವವಿಜ್ಞಾನ ವ್ಯವಸ್ಥೆಯೊಂದಿಗೆ ಸಂಯೋಜಿಸುವ 'ಡಿಪಾರ್ಟ್‌ಮೆಂಟ್ ಆಫ್ ಇಂಟಗ್ರೇಟಿವ್ ಮೆಡಿಸಿನ್' ಹಾಗೂ ಶುಕ್ರೂಷಕರ ವಸತಿ ಗೃಹವನ್ನು ಸಹ ಇದೇ ವೇಳೆ ಉದ್ಘಾಟಿಸಲಾಯಿತು.
ಏಳು ಮಹಡಿಗಳ ಈ ವಸತಿ ಗೃಹ 15 ಕೋಣೆಗಳನ್ನು ಹೊಂದಿದೆ. ಆಸ್ಪತ್ರೆಯ ಸಂಕೀರ್ಣದ ಪಕ್ಕದಲ್ಲಿಯೇ ಇದೆ. ಈ ಕಟ್ಟಡವನ್ನು ಅಗತ್ಯ ಅಗ್ನಿ ಸುರಕ್ಷತಾ ವ್ಯವಸ್ಥೆಗಳ ಮಾರ್ಗಸೂಚಿಗಳನ್ನು ಅನುಸರಿಸಿ ವಿನ್ಯಾಸಗೊಳಸಲಾಗಿದೆ. ಅಲ್ಲದೇ, ಶುಕ್ರೂಷಕರು ಆರಾಮದಾಯಕವಾಗಿ ವಾಸಿಸಲು ಅನುವಾಗುವಂತೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.