ಬೆಂಗಳೂರು: ಕೋವಿಡ್ ಹಿನ್ನೆಲೆ ಎರಡು ವರ್ಷಗಳಿಂದ ನಿಂತುಹೋಗಿದ್ದ ಮಾವು ಮೇಳಕ್ಕೆ ಈ ವರ್ಷ ಚಾಲನೆ ಸಿಗಲಿದೆ. ಇದಕ್ಕಾಗಿ ತೋಟಗಾರಿಕಾ ಇಲಾಖೆ ಲಾಲ್‌ಬಾಗ್‌ನಲ್ಲಿ ಅಗತ್ಯ ಸಿದ್ಧತೆಯನ್ನೂ ಆರಂಭಿಸಿದೆ. ಅಲ್ಲದೇ ಈ ವರ್ಷ ಕಬ್ಬನ್ ಉದ್ಯಾನ ಸೇರಿದಂತೆ ವಿವಿಧೆಡೆ ಮಾವು ಮೇಳವನ್ನು ಆಯೋಜಿಸಲು ಚಿಂತನೆ ನಡೆಸಲಾಗಿದೆ. ರಾಜ್ಯಕ್ಕೆ ಕೋವಿಡ್ ನಾಲ್ಕನೇ ಅಲೆ ಅಪ್ಪಳಿಸುವ ಆತಂಕ ಕೇಳಿ ಬರುತ್ತಿರುವ ಹಿನ್ನೆಲೆ ಜನರಿಗೆ ನಾವು ಖರೀದಿಯಲ್ಲಿ ಯಾವುದೇ ತೊಂದರೆ ಆಗದಿರಲಿ ಎಂಬ ಉದ್ದೇಶದಿಂದ ವಿವಿಧ ಆನ್ಲೈನ್ ವೇದಿಕೆಗಳ ಮೂಲಕ ಮಾವಿನ ಹಣ್ಣು ಪೂರೈಕೆ ಮಾಡಲು ಇಲಾಖೆ ತೀರ್ಮಾನಿಸಿದೆ.
ಆನ್ಲೈನ್ ವೇದಿಕೆ ಸಿದ್ಧ:ಮಾವಿನಹಣ್ಣನ್ನು ಆನ್ಲೈನ್ ಮೂಲಕವೂ ಜನರ ಮನೆ ಬಾಗಿಲಿಗೆ ತಲುಪಿಸಲು ತೀರ್ಮಾನಿಸಿದ್ದು, ಇದೇ ಬರುವ ಸೋಮವಾರದಿಂದ ಬೆಂಗಳೂರು ನಗರದ ಗ್ರಾಹಕರು ಈ ಸೇವೆಯ ಲಾಭ ಪಡೆಯಲಿದ್ದಾರೆ. ಇದಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದ್ದು, ಜನರಿಗೆ ನಾವು ಅತ್ಯಂತ ವ್ಯವಸ್ಥಿತವಾಗಿ ಮಾವು ಲಭ್ಯತೆಯ ಮಾಹಿತಿಯನ್ನು ನೀಡಲಿದ್ದೇವೆ. ಇಲಾಖೆಯ ವೆಬ್ಸೈಟ್ ಮೂಲಕ ಹಾಗೂ ವಿವಿಧ ಮಾರ್ಗಗಳಲ್ಲಿ ಜನರಿಗೆ ಮಾವು ಖರೀದಿಯ ಆನ್ಲೈನ್ ವಿಳಾಸವನ್ನು ತಲುಪಿಸುವ ಕಾರ್ಯ ಮಾಡುತ್ತೇವೆ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ನಾಗರಾಜ್ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಆನ್ಲೈನ್ ಮೂಲಕ ಮಾವು ಮಾರಾಟ ಮಾಡುವ ಕಾರ್ಯದಲ್ಲಿ ತೋಟಗಾರಿಕೆ ಇಲಾಖೆ ತೊಡಗಿದೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಕೋವಿಡ್ ಸಂದರ್ಭದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಮಾವು ಮಾರಾಟ ಆನ್ಲೈನ್ ಮೂಲಕ ಆಗಿತ್ತು. ಕಳೆದ ವರ್ಷ 40 ಸಾವಿರ ಗ್ರಾಹಕರು ಅಂಚೆ ಮೂಲಕ ಮಾವು ಖರೀದಿಸಿದ್ದರು. ಈ ಬಾರಿ ಇನ್ನೂ ಹೆಚ್ಚಿನ ಸಂಖ್ಯೆಯ ಗ್ರಾಹಕರು ನೋಂದಣಿ ಮಾಡಿ ಖರೀದಿಸುವ ಸಾಧ್ಯತೆಯಿದೆ ಎಂದಿದ್ದಾರೆ.