ಬೆಂಗಳೂರು:ಕೇವಲ ಹತ್ತು ದಿನಗಳೊಳಗೆ ನಗರದ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಗೆ ವೈಟ್ ಟಾಪಿಂಗ್ ಮತ್ತು ಅಡ್ಡ ಮೋರಿ ಅಭಿವೃದ್ಧಿ ಕಾಮಗಾರಿಯನ್ನು ಬಿಬಿಎಂಪಿ ಪೂರ್ಣಗೊಳಿಸಿದ್ದು, ಮಂಗಳವಾರ ಮಧ್ಯಾಹ್ನ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ಬಿಬಿಎಂಪಿ ಎನ್.ಆರ್.ರಸ್ತೆಯನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ರಸ್ತೆಯ ಬಲಭಾಗದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಇದೆ. ಸೇತುವೆ ಇಳಿಜಾರು ಹತ್ತಿರ ಮಳೆಯಾದಂತಹ ಸಂದರ್ಭದಲ್ಲಿ ಉಂಟಾಗುವ ನೀರು ಸಂಗ್ರಹ (ವಾಟರ್ ಲಾಗಿಂಗ್) ಸಮಸ್ಯೆಯನ್ನು ನಿವಾರಿಸುವ ಸಂಬಂಧ, ಈ ರಸ್ತೆಯ ಭಾಗದಲ್ಲಿ ವೈಟ್ ಟ್ಯಾಪಿಂಗ್ ಮತ್ತು ಅಡ್ಡಮೋರಿಯನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಯನ್ನು ಆಗಸ್ಟ್ 6 ರಂದು ಆರಂಭಿಸಲಾಗಿತ್ತು.
ಕಾಮಗಾರಿ ಹಿನ್ನೆಲೆಯಲ್ಲಿ ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಮುಂದಿನ 15 ದಿನಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಕುರಿತು ಜಂಟಿ ಪೊಲೀಸ್ ಆಯುಕ್ತರ(ಸಂಚಾರ) ಜತೆ ಪಾಲಿಕೆ ಮುಖ್ಯ ಇಂಜಿನಿಯರ್ ಚರ್ಚಿಸಿ ಭರವಸೆ ನೀಡಿದ್ದರು. ಬಿಬಿಎಂಪಿ ಅಧಿಕಾರಿಗಳ ಮುಂದಾಳತ್ವದಲ್ಲಿ ಕೇವಲ 10 ದಿನಗಳ ಅಂತರದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ವಾಹನ ಓಡಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ವೈಟ್ ಟ್ಯಾಪಿಂಗ್ ಹಾಗೂ ಅಡ್ಡಮೋರಿ ಕಾಮಗಾರಿಯನ್ನು 15 ದಿನಗಳೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ನೀಡಿದ ಆಶ್ವಾಸನೆಯಂತೆ 10 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿರುತ್ತದೆ. ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಸಹಕರಿಸಿದ ಸಾರ್ವಜನಿಕರಿಗೆ, ಸಂಚಾರಿ ಪೊಲೀಸ್ ಇಲಾಖೆಯವರಿಗೆ ಧನ್ಯವಾದ ಎಂದಿದ್ದಾರೆ.
ಇದನ್ನೂ ಓದಿ:ನನ್ನ ಕೊಂದರೂ ಸರಿ ಆಫ್ಘನ್ ತೊರೆಯಲ್ಲ: ಪಟ್ಟು ಹಿಡಿದ ಏಕೈಕ ಹಿಂದೂ ಅರ್ಚಕ