ಬೆಂಗಳೂರು:ವಿದ್ಯಾರ್ಥಿಗಳು ರಾಷ್ಟ್ರದ ಸಂಪತ್ತು. ಪೆನ್ನು ಹಿಡಿಯುವ ಕೈಗಳಿಗೆ ಗನ್ ಕೊಟ್ಟು ತರಬೇತಿ ನೀಡುತ್ತಿರುವುದು ಸರ್ಕಾರದ ವಿಕೃತ ಮನಸ್ಥಿಗೆ ಸಾಕ್ಷಿ. ಒಂದು ವೇಳೆ ಅಲ್ಪಸಂಖ್ಯಾತರು ಅವರಂತೆಯೇ ವರ್ತಿಸಿ, ಅವರ ಹಾಗೇಯೇ ಮನಬಂದಂತೆ ಮಾತನಾಡಿದ್ದರೆ, ಇಷ್ಟೊತ್ತಿಗಾಗಲೇ ಕೋಲಾಹಲ ಸೃಷ್ಟಿಸಿ ಬಿಡುತ್ತಿದ್ದರು. ಬಿಜೆಪಿಗೆ ಒಂದು ನ್ಯಾಯ, ಬೇರೆಯವರಿಗೊಂದು ನ್ಯಾಯವಾ ಎಂದು ಶಾಸಕ ಜಮೀರ್ ಕಿಡಿ ಕಾರಿದ್ದಾರೆ.
ಈ ಸಂಬಂಧ ಮಾಧ್ಯಮ ಸಂದೇಶ ಬಿಡುಗಡೆ ಮಾಡಿರುವ ಅವರು, ನಾವೇನು ಎಕೆ-47 ತರಬೇತಿ ಅಥವಾ ಬಾಂಬ್ ಹಾಕುವುದನ್ನು ಹೇಳಿಕೊಡುತ್ತಿಲ್ಲ. ಏರ್ಗನ್ ತರಬೇತಿ ನೀಡುತ್ತಿದ್ದೇವೆ ಅಷ್ಟೇ ಎಂದು ಸಿ.ಟಿ. ರವಿ ಸಮರ್ಥಿಸಿಕೊಂಡಿರುವುದು ಎಷ್ಟು ಸರಿ. ಸಚಿವರಾಗಿ ಜವಾಬ್ದಾರಿ ವಹಿಸಿ ಕೊಂಡಿದ್ದವರು ಈ ರೀತಿ ಉಡಾಫೆ ಉತ್ತರ ನೀಡುವುದು ಸರಿಯಲ್ಲ ಎಂದರು.
ಕೊಡಗು ಜಿಲ್ಲೆಯ ಪೊನ್ನಾರಪೇಟೆ ಶಹರದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ಏರ್ಗನ್ ತರಬೇತಿಗಾಗಿ, ಪೊಲೀಸ್ ಇಲಾಖೆಯ ಅನುಮತಿ ಪಡೆದಿದ್ದಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಇದಕ್ಕೆ ಯಾವುದೇ ರೀತಿಯ ಅನುಮತಿ ಪಡೆಯಬೇಕಿಲ್ಲ ಎಂಬ ನಿರ್ಲಕ್ಷ್ಯದ ಉತ್ತರ ನೀಡಿ ಜಾಣಕುರುಡತನ ಪ್ರದರ್ಶಿಸಿರುವ ಕೊಡಗು ಜಿಲ್ಲೆಯ ಎಸ್ಪಿ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.