ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ತಮ್ಮನ್ನು ಅವಧಿಪೂರ್ವ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಐಎಎಸ್ ಅಧಿಕಾರಿ ಬಿ. ಶರತ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇದೇ ವೇಳೆ, ಸಿಎಟಿ ನೀಡಿರುವ ಆದೇಶ ಪ್ರಶ್ನಿಸಿ ಸರ್ಕಾರವೂ ಕೂಡ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ವರ್ಗಾವಣೆ ಪ್ರಶ್ನಿಸಿ ಐಎಎಸ್ ಅಧಿಕಾರಿ ಬಿ. ಶರತ್ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಸರ್ಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ರಾಜ್ಯ ಸರ್ಕಾರ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೆಲ್ಲರೂ ಕೋವಿಡ್ ನಿಯಂತ್ರಣ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಹೀಗಾಗಿ ಅರ್ಜಿಗೆ ಪ್ರತಿಕ್ರಿಯಿಸಲು ಹೆಚ್ಚಿನ ಕಾಲಾವಕಾಶ ಬೇಕಿದೆ. ಆದ್ದರಿಂದ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕು ಎಂದು ಕೋರಿದರು.
ಹೆಚ್ಚಿನ ಕಾಲಾವಕಾಶ ನೀಡಲು ಒಪ್ಪದ ಪೀಠ, ವಿಚಾರಣೆಯನ್ನು ಜೂನ್ 7ಕ್ಕೆ ಮುಂದೂಡಿ ಅಷ್ಟರಲ್ಲಿ ಸರ್ಕಾರ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿತು. ರಾಜ್ಯ ಸರ್ಕಾರ ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಡಿಸಿ ಹುದ್ದೆಗೆ ನಿಯೋಜಿಸಿಲು ಬಿ. ಶರತ್ ಅವರನ್ನು ವರ್ಗಾವಣೆ ಮಾಡಿತ್ತು. 2020ರ ಆಗಸ್ಟ್ ನಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಬಿ. ಶರತ್ ಅವರನ್ನು ಒಂದು ತಿಂಗಳ ಅವಧಿಗೆ ಮೊದಲೇ ಸೆಪ್ಟೆಂಬರ್ ತಿಂಗಳಲ್ಲಿ ವರ್ಗಾವಣೆ ಮಾಡಿತ್ತು. ಸರ್ಕಾರದ ಈ ಕ್ರಮ ಪ್ರಶ್ನಿಸಿ ಬಿ. ಶರತ್ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣಕ್ಕೆ(ಸಿಎಟಿ) ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಸಿಎಟಿ ತೀರ್ಪು ಪ್ರಕಟಿಸಲು ವಿಳಂಬ ಮಾಡಿತ್ತು. ತೀರ್ಪು ಪ್ರಕಟಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದ ಬಳಿಕ ಬಿ. ಶರತ್ ಅವರ ವರ್ಗಾವಣೆ ವಿಚಾರವಾಗಿ ಸಕ್ಷಮ ಪ್ರಾಧಿಕಾರವೇ ನಿರ್ಣಯಿಸುವಂತೆ ಸೂಚಿಸಿ, ವರ್ಗಾಯಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ವರ್ಗಾವಣೆ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ಐಎಎಸ್ ಅಧಿಕಾರಿ ಬಿ. ಶರತ್, ಸಿಎಟಿ ಆದೇಶವನ್ನು ಕೂಡ ರದ್ದುಗೊಳಿಸಬೇಕು ಎಂದು ಕೋರಿದ್ದಾರೆ. ಹಾಗೆಯೇ, ರೋಹಿಣಿ ಸಿಂಧೂರಿ ನೇಮಕ ರದ್ದುಗೊಳಿಸುವಂತೆಯೂ ಮನವಿ ಮಾಡಿದ್ದಾರೆ. ಇನ್ನು ಅಧಿಕಾರಿಗಳ ವರ್ಗಾವಣೆಗೆ ಮಂಡಳಿ ರಚಿಸಲು ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವೂ ಅರ್ಜಿ ಸಲ್ಲಿಸಿದೆ.