ಬೆಂಗಳೂರು : ಕೇಂದ್ರ ಸರ್ಕಾರದ ಆರ್ಥಿಕ ಕ್ರಮದಿಂದ ರಾಜ್ಯಕ್ಕೆ ಬರಬೇಕಿದ್ದ 25 ಸಾವಿರ ಕೋಟಿ ರೂ. ಗೂ ಹೆಚ್ಚಿನ ಹಣ ಕಡಿತ ಆಗಿದ್ದು, ಇದರ ಪರಿಣಾಮವಾಗಿ ಮುಂದಿನ ಬಜೆಟ್‍ನಲ್ಲಿ ಅನ್ನಭಾಗ್ಯ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳಿಗೆ ಕತ್ತರಿ ಹಾಕಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಹದಿನೈದನೇ ಹಣಕಾಸು ಆಯೋಗ ಈ ಸಲ ರಾಜ್ಯಕ್ಕೆ ನಿಗದಿಪಡಿಸಬೇಕಿರುವ ಅನುದಾನದಲ್ಲಿ 9 ಸಾವಿರ ಕೋಟಿ ರೂ. ಗಳನ್ನು ಕಡಿತಗೊಳಿಸಿದ್ದು, ಅದೇ ಕಾಲಕ್ಕೆ ಜಿ.ಎಸ್.ಟಿ ಮತ್ತಿತರ ತೆರಿಗೆ, ಅನುದಾನಗಳ ಬಾಬ್ತಿನಲ್ಲಿ ರಾಜ್ಯಕ್ಕೆ ಬರಬೇಕಿರುವ ಹಣದ ಪ್ರಮಾಣ 16000 ಕೋಟಿ ರೂ. ಬಂದಿಲ್ಲ. ಹೀಗಾಗಿ 2020-2021ನೇ ಸಾಲಿನ ರಾಜ್ಯ ಬಜೆಟ್‍ಗೆ ಹಣದ ತೀವ್ರ ಕೊರತೆ ಎದುರಾಗಿದ್ದು, ಕಡಿತವಾದ ಹಣವನ್ನು ಭರ್ತಿ ಮಾಡಿಕೊಳ್ಳಲು ಜನರ ಮೇಲೆ ಹೆಚ್ಚು ತೆರಿಗೆ ಹೇರಲಾಗದ ಅಸಹಾಯಕತೆಗೆ ಸಿಲುಕಿರುವ ಯಡಿಯೂರಪ್ಪ, ಯೋಜನೆಗಳಿಗೆ ನೀಡುವ ಹಣದ ಪ್ರಮಾಣವನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಸಿದ್ಧರಾಮಯ್ಯ ಅವರ ಕಾಲದ ಜನಪ್ರಿಯ ಅನ್ನಭಾಗ್ಯ ಯೋಜನೆಯಿಂದ ಹಿಡಿದು ಹಲವು ಯೋಜನೆಗಳಿಗೆ ನೀಡುವ ಅನುದಾನದ ಪ್ರಮಾಣವನ್ನು ಕಡಿತಗೊಳಿಸಲು ಯಡಿಯೂರಪ್ಪ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಈ ಕುರಿತು ಇಲಾಖೆ ಪ್ರಮುಖರಿಗೆ ಈಗಾಗಲೇ ಸಂದೇಶ ನೀಡತೊಡಗಿದ್ದು, ತಮ್ಮ ತಮ್ಮ ಇಲಾಖೆಗಳಲ್ಲಿ ಇಂತಿಂತಹ ಯೋಜನೆಗಳಿಗಾಗಿ ಹೆಚ್ಚಿನ ಹಣ ನೀಡಬೇಕು ಎಂಬ ಪ್ರಸ್ತಾವವನ್ನು ನಿರಾಕರಿಸತೊಡಗಿದ್ದಾರೆ.
2019-2020ರ ಬಜೆಟ್‍ನಲ್ಲಿ ವಿವಿಧ ಇಲಾಖೆಗಳಿಗೆ ಮಂಜೂರು ಮಾಡಲಾಗಿದ್ದ ಅನುದಾನದ ಪ್ರಮಾಣದಲ್ಲೇ ಹದಿನೈದರಿಂದ ಇಪ್ಪತ್ತರಷ್ಟು ಹಣವನ್ನು ಕಡಿತ ಮಾಡುವ ಅನಿವಾರ್ಯತೆ ಎದುರಾಯಿತು. ರಾಜ್ಯ ಈ ಹಿಂದೆ ಕಂಡರಿಯದಂತಹ ಜಲಪ್ರಳಯ ಶುರುವಾದ ಬೆನ್ನಲ್ಲೇ ಸುಮಾರು 40 ಸಾವಿರ ಕೋಟಿ ರೂ. ಗಳಷ್ಟು ನಷ್ಟವಾಗಿದ್ದು, ವಿವಿಧ ಇಲಾಖೆಗಳಿಗೆ ನೀಡಿದ ಅನುದಾನದಲ್ಲಿ ಶೇ. 15 ರಿಂದ 20 ರಷ್ಟು ಕಡಿತ ಮಾಡಿದರೂ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.