ಬೆಂಗಳೂರು:ಸಿಲಿಕಾನ್ ಸಿಟಿ ನಿವಾಸಿಗರಿಗೆ ಹಾಗೂ ಬಿಬಿಎಂಪಿಗೆ, ಏಕಕಾಲದಲ್ಲಿ ಅನುಕೂಲವಾಗುವಂತಹ ಆಸ್ತಿಗಳ ಬಿ ಖಾತಾದಿಂದ ಎ ಖಾತಾ ವರ್ಗಾವಣೆ ಮಾಡಿಕೊಡುವ ಪ್ರಸ್ತಾವನೆ ಚುರುಕು ಪಡೆದಿದೆ.
ಈ ಕುರಿತು ಮೇಯರ್ ಗಂಗಾಂಬಿಕೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಖಾತಾ ವರ್ಗಾವಣೆಯ ನಿಯಮಾವಳಿಗಳನ್ನು ರೂಪಿಸುವ ಸಮಿತಿ ರಚನೆ ಕುರಿತು ಎರಡು ದಿನದಲ್ಲಿ ಬಿಬಿಎಂಪಿ, ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದೆ.
ಸಮಿತಿಯ ಸದಸ್ಯರು ಯಾರ್ಯಾರು ಎಂಬ ಪಟ್ಟಿಯನ್ನು ಪಾಲಿಕೆ ಅಧಿಕಾರಿಗಳು ಸಿದ್ಧಪಡಿಸಿದ್ದು, ನಗರಾಭಿವೃದ್ಧಿ ಇಲಾಖೆ ಈ ಸಮಿತಿಗೆ ಗ್ರೀನ್ ಸಿಗ್ನಲ್ ನೀಡಿದರೆ, ಆ ಬಳಿಕ ಈ ಸಮಿತಿಯು ಸಭೆಗಳನ್ನು ನಡೆಸಿ ಖಾತಾ ವರ್ಗಾವಣೆಯ ನಿಯಮಾವಳಿಗಳನ್ನು ರಚಿಸಲಿದೆ. ಇದಕ್ಕಾಗಿ ಕಾನೂನು ಸಲಹೆಯೂ ಬೇಕಾಗಿದ್ದು, ಕಾನೂನು ವಿಭಾಗದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಈ ಸಮಿತಿಯಲ್ಲಿರಲಿದ್ದಾರೆ.
ಸುಮಾರು ವರ್ಷಗಳಿಂದ ಖಾತಾ ವರ್ಗಾವಣೆ ಆಗಿರದೆ ಇರುವುದರಿಂದ ಭೂ ಮಾಲೀಕರಿಗೆ ಮನೆಕಟ್ಟಲು ಪ್ಲಾನ್ ಸ್ಯಾಂಕ್ಷನ್, ಬ್ಯಾಂಕ್ ಸಾಲ, ನಕ್ಷೆ ಮಂಜೂರಾತಿ ಸೇರಿದಂತೆ ವಾಸಯೋಗ್ಯ ಪ್ರಮಾಣಪತ್ರಗಳು ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಹಲವು ವರ್ಷಗಳಿಂದ ಕೃಷಿ ಭೂಮಿಯನ್ನು ವಸತಿ ಪ್ರದೇಶಕ್ಕೆ ಬಳಸಿಕೊಳ್ಳಲು ಇರುವ ಎ ಖಾತೆಯನ್ನು ನೀಡುವ ಬಗ್ಗೆ ಹಲವಾರು ಬಾರಿ ಹೇಳಿದ್ದರೂ, ಈವರೆಗೂ ಜಾರಿಗೆ ಬಂದಿಲ್ಲ.
ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಎ ಖಾತಾ ನೀಡುವುದನ್ನು, ಬಿಬಿಎಂಪಿ 2008ರಲ್ಲೇ ಸ್ಥಗಿತಗೊಳಿಸಿದ್ದು, ಇದೀಗ ಮತ್ತೆ ಚಾಲನೆ ದೊರಕುವ ಭರವಸೆ ಮೂಡಿದೆ. ಇದರಿಂದ ಪಾಲಿಕೆಗೂ 1,000 ದಿಂದ 1,500 ಕೋಟಿ ರೂಪಾಯಿಯಷ್ಟು ಆದಾಯದ ನಿರೀಕ್ಷೆಯಿದೆ. ಅಲ್ಲದೆ ಲಕ್ಷಾಂತರ ಭೂಮಾಲೀಕರಿಗೂ ಅನುಕೂಲವಾಗಲಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.