ಕರ್ನಾಟಕ

karnataka

ETV Bharat / city

ಅಝಾನ್​​ ಬಗ್ಗೆ ರಾಜ್ಯ ವಕ್ಫ್ ಮಂಡಳಿ ಯಾವುದೇ ನಿರ್ಬಂಧ ಹೇರಿಲ್ಲ: ಮೌಲಾನ ಶಾಫಿ ಸಾದಿ ಸ್ಪಷ್ಟನೆ

ಶಬ್ದ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಸೀದಿ ಮತ್ತು ದರ್ಗಾಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಲೌಡ್ ಸ್ಪೀಕರ್ ಬಳಕೆಯನ್ನು ನಿಷೇಧಿಸಿ ಕರ್ನಾಟಕ ವಕ್ಫ್ ಮಂಡಳಿ ಆದೇಶ ಹೊರಡಿಸಿದ್ದು, ವಕ್ಫ್‌ ಬೋರ್ಡ್‌ ಹೊರಡಿಸಿರುವ ಈ ಆದೇಶದಲ್ಲಿ ಸಾಕಷ್ಟು ಗೊಂದಲಗಳು ಎದುರಾಗಿದ್ದವು. ಈ ಕುರಿತು ಇದೀಗ ವಕ್ಫ್‌ ಬೋರ್ಡ್‌ ಸ್ಪಷ್ಟೀಕರಣ ನೀಡಿದೆ.

Waqf Board
Waqf Board

By

Published : Mar 17, 2021, 1:11 PM IST

ಬೆಂಗಳೂರು: ರಾಜ್ಯದ ವಕ್ಫ್‌ ಬೋರ್ಡ್‌ನಲ್ಲಿ ನೋಂದಣಿಯಾಗಿರುವ ಮಸೀದಿಗಳು ಮತ್ತು ದರ್ಗಾಗಳಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಬಳಕೆಗೆ ಕಡಿವಾಣ ಹಾಕಲಾಗಿದೆಯೇ ಹೊರತು ಸುತ್ತೋಲೆಯಲ್ಲಿ ಅಝಾಜಾನ್‌ಗೆ ಯಾವುದೇ ನಿರ್ಬಂಧ ಹೇರಿಲ್ಲ ಎಂದು ವಕ್ಫ್‌ ಬೋರ್ಡ್‌ ತಿಳಿಸಿದೆ.

ಶಬ್ದ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಸೀದಿ ಮತ್ತು ದರ್ಗಾಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಲೌಡ್ ಸ್ಪೀಕರ್ ಬಳಕೆಯನ್ನು ನಿಷೇಧಿಸಿ ಕರ್ನಾಟಕ ವಕ್ಫ್ ಮಂಡಳಿ ಮಾರ್ಚ್ 9 ರಂದು ಆದೇಶ ಹೊರಡಿಸಿದ್ದು, ವಕ್ಫ್‌ ಬೋರ್ಡ್‌ ಹೊರಡಿಸಿರುವ ಈ ಆದೇಶದ ವಿಚಾರವಾಗಿ ಸಾಕಷ್ಟು ಗೊಂದಲಗಳು ಎದುರಾಗಿದ್ದವು. ಇದೀಗ ರಾಜ್ಯ ವಕ್ಫ್‌ ಬೋರ್ಡ್‌ ಸದಸ್ಯ ಮತ್ತು ಕರ್ನಾಟಕ ಮುಸ್ಲಿಂ ಜಮಾತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಶಾಫಿ ಸಾದಿ ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.

ಮೌಲಾನ ಶಾಫಿ ಸಾದಿ ಟ್ವೀಟ್​

ಅಝಾನ್ ಬಗ್ಗೆ ರಾಜ್ಯ ವಕ್ಫ್ ಮಂಡಳಿ ಯಾವುದೇ ನಿರ್ಬಂಧ ಹೇರಿಲ್ಲ. ಸುತ್ತೋಲೆಯ ಕ್ರಮ ಸಂಖ್ಯೆ ಮೂರರಲ್ಲಿ ಸ್ಪಷ್ಟವಾಗಿ ಅಝಾನ್ ಮತ್ತು ಇತರ ಯಾವ ವಿಚಾರಗಳಿಗೆ ಧ್ವನಿವರ್ಧಕಗಳನ್ನು ಬಳಸಬಹುದೆಂದು ಸ್ಪಷ್ಟಪಡಿಸಲಾಗಿದೆ. 10-07-2017 ರಂದು ಆಗಿನ ವಕ್ಫ್ ಮಂಡಳಿಯ ಆಡಳಿತಾಧಿಕಾರಿಯವರು ಹೊರಡಿಸಿದ ಸುತ್ತೋಲೆಯ ಯಥಾ ಪ್ರತಿಯನ್ನೇ 19-12-2020 ರಂದು ಹೊರಡಿಸಲಾಗಿದೆ. ನಿರ್ಣಯದಲ್ಲಿ ಯಾವುದೇ ಲೋಪದೋಷಗಳಿದ್ದರೂ ಮುಂದಿನ ಸಭೆಯಲ್ಲಿ ಚರ್ಚಿಸಿ ಸರಿಪಡಿಸಲಾಗುವುದು ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಆದೇಶ ಪ್ರತಿ

ಶಬ್ದಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇತ್ತೀಚೆಗೆ ವಕ್ಫ್ ಬೋರ್ಡ್ ಹೊಸ ಆದೇಶ ಹೊರಡಿಸಿತ್ತು. ಅದರಲ್ಲಿ ನಿಗದಿತ ಸಮಯದಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ತಡೆಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿತ್ತು. ಅಲ್ಲದೇ ಶಬ್ದ ಮಾಲಿನ್ಯದಿಂದ ಆರೋಗ್ಯದ ಮೇಲಷ್ಟೇ ಅಲ್ಲ, ಜನಸಾಮಾನ್ಯರ ಮನಸ್ಸಿನ ಮೇಲೆಯೂ ಗಂಭೀರ ಪರಿಣಾಮ ಬೀಳಲಿದೆ. ಆಸ್ಪತ್ರೆಗಳು, ನ್ಯಾಯಾಲಯ, ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ನಿಶ್ಯಬ್ದ ವಲಯಗಳಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಬಳಸೋದು ಪರಿಸರ ಸಂರಕ್ಷಣಾ ಕಾಯ್ದೆ ಅನ್ವಯ ದಂಡನಾರ್ಹವಾಗಿದೆ. ಈ ಹಿನ್ನೆಲೆ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಮಸೀದಿ ಹಾಗೂ ದರ್ಗಾಗಳಲ್ಲಿ ಧ್ವನಿವರ್ಧಕ ಬಳಸುವಂತಿಲ್ಲ. ಉಳಿದ ಸಮಯಗಳಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಗಮನದಲ್ಲಿಟ್ಟು ಮೈಕ್‌ ಬಳಸಬೇಕು ಎಂದು ಸ್ಪಷ್ಟವಾಗಿ ತಿಳಿಸಿತ್ತು. ಆದರೆ, ಇದರಿಂದ ಮುಸ್ಲಿಂ ಧರ್ಮಿಯರಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿ ಹೋರಾಟದ ಹಾದಿಯನ್ನು ಕೆಲವರು ತುಳಿದಿದ್ದರು. ಗೊಂದಲ ಅರಿತ ಬೋರ್ಡ್ ಇದೀಗ ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡುವ ಕಾರ್ಯ ಮಾಡಿದೆ.

ಅಂದಿನ ಆದೇಶದಲ್ಲಿ ಏನಿತ್ತು?:

2021ರ ಮಾರ್ಚ್ 9 ಕ್ಕೆ ರಾಜ್ಯ ವಕ್ಫ್ ಬೋರ್ಡ್ ಹೊರಡಿಸಿದ ಆದೇಶದಲ್ಲಿ ಅತ್ಯಂತ ಪ್ರಮುಖವಾಗಿ, ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳನ್ನು ಬಳಸಬಾರದು. ಹಗಲಿನಲ್ಲಿ ಮಾನದಂಡಗಳ ಪ್ರಕಾರ ಧ್ವನಿವರ್ಧಕಗಳನ್ನು ಬಳಬೇಕು. ಧ್ವನಿವರ್ಧಕವನ್ನು ಅಝಾನ್‌ ಮತ್ತು ಸಾವು, ಸಮಾಧಿಯ ಸಮಯ, ಚಂದ್ರನನ್ನು ನೋಡುವುದು ಸೇರಿದಂತೆ ಇನ್ನಿತರ ಪ್ರಮುಖ ಘೋಷಣೆಗಳಿಗೆ ಮಾತ್ರ ಬಳಸಬೇಕು. ಸಲಾತ್, ಜುಮಾ ಖುತ್ಬಾ, ಬಯಾನ್ಸ್ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಮಸೀದಿ ಅಥವಾ ದರ್ಗಾದ ಆವರಣದೊಳಗೆ ಇರುವ ಮೈಕ್‌ಗಳನ್ನು ಬಳಸಬೇಕು. ಯಾವುದೇ ಸಂದರ್ಭದಲ್ಲಿ ಶಬ್ದಗಳನ್ನು ಹೊರಸೂಸುವ ಪಟಾಕಿಗಳನ್ನು ಮಸೀದಿ, ದರ್ಗಾದ ಆವರಣದಲ್ಲಿ ಸುಡಬಾರದು ಎಂದು ತಿಳಿಸಿದೆ.

ಇದನ್ನೂ ಓದಿ:ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಮಸೀದಿ, ದರ್ಗಾಗಳಲ್ಲಿ ಧ್ವನಿವರ್ಧಕ ನಿಷೇಧಿಸಿದ ರಾಜ್ಯ ವಕ್ಫ್​ ಮಂಡಳಿ!

ABOUT THE AUTHOR

...view details