ಬೆಂಗಳೂರು/ಬೆಳಗಾವಿ:ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ವಿದ್ಯುತ್ ದೀಪಗಳ ಸ್ವಯಂಚಾಲಿತ ನಿಯಂತ್ರಣ ವ್ಯವಸ್ಥೆ ತರುವ ಉದ್ದೇಶವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿಧಾನಸಭೆಗೆ ತಿಳಿಸಿದರು.
ಶೂನ್ಯವೇಳೆಯಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ನಲ್ಲಿಯ ಮೂಲಕ ಪೂರೈಕೆಯಾದ ನೀರು ಸಂಪು ಭರ್ತಿಯಾದ ಕೂಡಲೇ ಸ್ವಯಂಚಾಲಿತವಾಗಿ ನಿಯಂತ್ರಣವಾಗಬೇಕು. ಅದೇ ರೀತಿ ಬೀದಿ ದೀಪಗಳು ನಿರ್ದಿಷ್ಟ ಅವಧಿಯಲ್ಲಿ ಬೆಳಗುವಂತೆ ವ್ಯವಸ್ಥೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು.
ನೀರು, ಬೀದಿದೀಪಗಳ ಬಿಲ್‍ಗಳು 2015 ರಿಂದಲೂ ಬಾಕಿ ಇವೆ. ಅದರ ಹಣ 4,229 ಕೋಟಿ ರೂ.ಗೆ ತಲುಪಿದೆ. ಕೇಂದ್ರ, ರಾಜ್ಯ ಸರ್ಕಾರಗಳಿಂದಲೂ ಹೆಚ್ಚಿನ ಹಣ ಕೊಡಲಾಗುತ್ತಿದೆ. ಗ್ರಾಪಂ ಕಟ್ಟಡಗಳಿಗೆ ಸೋಲಾರ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. 750 ಗ್ರಾಮ ಪಂಚಾಯಿತಿಗಳಿಗೆ ತಲಾ 25 ಲಕ್ಷ ನೀಡಿದ್ದು, ಮುಂದಿನ ವರ್ಷ 1,500 ಗ್ರಾಪಂಗಳಿಗೆ ನೀಡಲಾಗುವುದು ಎಂದರು.
ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಅನುದಾನ ಹೆಚ್ಚಳ
ರಾಜ್ಯದ ಗ್ರಾಮೀಣ ಭಾಗಗಳಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಗ್ರಾಮ ಪಂಚಾಯಿತಿಗಳು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದ್ದು, ನಿರ್ವಹಣೆಗೆ ಅಗತ್ಯ ಕಂಡು ಬಂದರೆ ಹೆಚ್ಚಿನ ಅನುದಾನ ನೀಡಲು ಸರ್ಕಾರ ಸಿದ್ದವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಡಾ.ಅಜಯ್ ಧರ್ಮಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿದ್ದೇವೆ. ಗ್ರಾಮ ಪಂಚಾಯಿತಿಗಳು ನೀರಿನ ಮಾರಾಟದಿಂದ ಬಂದ ಹಣದಲ್ಲಿ ಘಟಕಗಳನ್ನು ಸುಸ್ಥಿತಿಯಲ್ಲಿಡಲು ಸೂಚಿಸಲಾಗಿದೆ. ಪ್ರತಿ ಘಟಕಕ್ಕೆ ತಿಂಗಳಿಗೆ ನಿರ್ವಹಣೆ ವೆಚ್ಚವಾಗಿ ಮೂರು ಸಾವಿರ ಹಣವನ್ನು ನೀಡುತ್ತಿದ್ದೇವೆ ಎಂದರು.
ಇದನ್ನೂ ಓದಿ: ತಿಂಗಳಾಂತ್ಯದಲ್ಲಿ ವಿದ್ಯಾರ್ಥಿ ವೇತನ ಬಿಡುಗಡೆ: ಸಮಾಜ ಕಲ್ಯಾಣ ಸಚಿವರ ಅಭಯ
ಘಟಕಗಳ ನಿರ್ವಹಣೆಗೆ ನೀಡುತ್ತಿರುವ ಅನುದಾನ ಕಡಿಮೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಗತ್ಯ ಕಂಡುಬಂದರೆ ಹೆಚ್ಚುವರಿ ಅನುದಾನ ನೀಡಲು ಸಿದ್ದ ಎಂದರು. ಕೆಲವು ಕಡೆ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗಳು ಒಪ್ಪದಿದ್ದಲ್ಲಿ ಗುತ್ತಿಗೆದಾರರಿಗೆ ಸರ್ಕಾರ ಕೊಡಲು ಸಿದ್ದವಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು.