ಬೆಂಗಳೂರು:ಖರ್ಚಿಗೆ ಹಣವಿಲ್ಲವೆಂದು ಸರಗಳ್ಳತನಕ್ಕೆ ಇಳಿದಿದ್ದ ಆಸಾಮಿಯನ್ನ ನಗರದ ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 9.5 ಗ್ರಾಂ ತೂಕದ 40 ಸಾವಿರ ಮೌಲ್ಯದ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ.
ಖರ್ಚಿನ ಹಣಕ್ಕಾಗಿ ಸರಗಳ್ಳತನಕ್ಕಿಳಿದ ಪಿಯುಸಿ ವಿದ್ಯಾರ್ಥಿ: ಕಳ್ಳನನ್ನು ಚೇಸ್ ಮಾಡಿ ಹಿಡಿದ ಆಟೋ ಡ್ರೈವರ್ - ಬೆಂಗಳೂರಲ್ಲಿ ಸರಗಳ್ಳತನ
ಖರ್ಚಿಗೆ ಹಣ ಇಲ್ಲ ಇಲ್ಲವೆಂದು ಸರಗಳ್ಳತನ ಮಾಡುತ್ತಿದ್ದ ಪಿಯುಸಿ ವಿದ್ಯಾರ್ಥಿಯನ್ನು ಆಟೋ ಚಾಲಕರೊಬ್ಬರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ದುಡಿಮೆ ಇಲ್ಲದಿದ್ದಾಗ ಖರ್ಚಿಗೆ ಕಾಸು ಇಲ್ಲದಿದ್ದಾಗ ಕೆಲವರು ಅಡ್ಡ ದಾರಿ ಹಿಡಿಯುತ್ತಾರೆ. ಇದೇ ರೀತಿ ಖರ್ಚಿಗೆ ದುಡ್ಡಿಲ್ಲದ ಕಾರಣ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಸರಗಳ್ಳತನಕ್ಕೆ ಮುಂದಾಗಿದ್ದಾನೆ. ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ 5 ಗಂಟೆಯ ಸುಮಾರಿಗೆ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಸರ ಕಿತ್ತುಕೊಂಡ ಬಳಿಕ ಮಹಿಳೆ ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡಿದ್ದಾಳೆ. ಆಗ ಸ್ಥಳದಲ್ಲೇ ಇದ್ದ ಆಟೋ ಡ್ರೈವರ್ 2 ಕಿಮೀ ವರೆಗೂ ಚೇಸ್ ಮಾಡಿ ಕಳ್ಳನನ್ನು ಹಿಡಿದಿದ್ದಾರೆ.
ಆಟೋ ಚಾಲಕ ರುದ್ರೇಶ್ ಎಂಬುವವರು ಕಳ್ಳನನ್ನು ಹಿಡಿದು ಸೋಲದೇವನಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆಟೋ ಚಾಲಕನ ಕಾರ್ಯಕ್ಕೆ ಪೊಲೀಸ್ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ. ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.